ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ಪ್ರಸ್ತುತ ಕನ್ನಡ ಭಾಷೆ ಇಷ್ಟೊಂದು ಉನ್ನತ ಸ್ಥಿತಿಯಲ್ಲಿ ವಿಜೃಂಭಿಸುತ್ತಿದೆ ಎಂದರೆ ಅದರ ದೊಡ್ಡ ಶ್ರೇಯಸ್ಸು ಅನಕೃ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ತಿಳಿಸಿದರು.ಪಟ್ಟಣದ ಶಿಕ್ಷಕರ ಭವನದಲ್ಲಿ ಗಾನಕಲಾಭೂಷಣ ವಿದ್ವಾನ್ ಡಾ. ಆರ್. ಕೆ. ಪದ್ಮನಾಭರವರ ಅಭಿಮಾನಿಗಳ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅರಕಲಗೂಡು ಸಂಯುಕ್ತ ಆಶ್ರಯದಲ್ಲಿ ಕನ್ನಡದ ಸಾಹಿತ್ಯ ಸಾರ್ವಭೌಮ ಡಾ. ಅನಕೃ ಒಂದು ನೆನಪು, 2025ರ ಅನಕೃ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಹಂಪ ನಾಗರಾಜಯ್ಯ, ಅನಕೃ ಮತ್ತು ತಾರಾಸು ಕನ್ನಡ ಸಾಹಿತ್ಯದ ಪರಂಪರೆಗೆ ಒಂದು ಹೊಸ ತಿರುವು ನೀಡಿದರು ಎಂದು ಬಣ್ಣಿಸಿದರು.
ಅನಕೃ ಭಾಷಣವನ್ನು ಎಲ್ಲರೂ ಕುಳಿತು ಕೇಳುತ್ತಿದ್ದರು. ಅವರು ಯುವಕರನ್ನು ಪ್ರೋತ್ಸಾಹಿಸುವ ವಾಕ್‌ಚಾತುರ್ಯ ಹೇಗಿತ್ತು ಎಂದರೆ, ಒಮ್ಮೆ ಅನಕೃ ಅವರನ್ನು ಭಾಷಣ ಮಾಡಲು ಕರೆಯಲು ಬಂದಾಗ, ಅವರನ್ನು ನನ್ನ ಕೊಠಡಿಗೆ ಕರೆದುಕೊಂಡು ಬಂದು ನೀವು ಇವರ ಊರಿಗೆ ಹೋಗಿ ಭಾಷಣ ಮಾಡಬೇಕೆಂದು ಹೇಳಿದರು. ಈ ವೇಳೆ ನೀವ್ಯಾಕೆ ಬಂದಿರಿ ನಾನೇ ಬರುತ್ತಿದ್ದೆ ಎಂದಾಗ ನಿಮ್ಮ ನೋಡಬೇಕು ಎನಿಸಿತು ಬಂದೆ ಎಂದು ಹೇಳಿದರು. ಅಂದರೆ, ಬೆಳೆಯುವ ಚೈತನ್ಯಕ್ಕೆ ಅವಕಾಶ ಒದಗಿಸಬೇಕು ಎಂದು ಹೇಳುತ್ತಿದ್ದರು ಎಂದರು.ನಾನು ವೃದ್ಧಾಪ್ಯಕ್ಕೆ ಬಂದಿದ್ದರೂ ನಾನು ಚನ್ನಾಗಿ ಓಡಾಡಿಕೊಂಡು ಇರಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ಇಂದು ಮತ್ತೆ ಆಶೀರ್ವಾದ ಮಾಡಿದ್ದೀರಿ. ಮತ್ತೆ 10 ವರ್ಷ ಆಯಸ್ಸು ನೀಡುತ್ತದೆ. ಅನಕೃ ಅವರು ಬಿತ್ತಿದ ಕಾಳು ಮೊಳಕೆಯೊಡೆದು ಚಿಗುರಿ, ರೆಂಬೆಕೊಂಬೆಗಳಾಗಿ ರಾಜ್ಯದ ಉದ್ದಗಲಕ್ಕೂ ಪಸರಿಸಿವೆ. ಅವರು ಇದ್ದ ಕಾಲದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಅವರಿಗೆ ಸಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಗಾನಕಲಾ ಭೂಷಣ ವಿದ್ವಾನ್ ಡಾ. ಆರ್. ಕೆ. ಪದ್ಮನಾಭ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದಕ್ಕೂ ಮುನ್ನ ಕೋಟೆಕೋತ್ತಲು ಆವರಣದಿಂದ ಅನಕೃ ವೃತ್ತದ ಮೂಲಕ ಶಿಕ್ಷಕರ ಭವನದವರೆಗೆ ಅನಕೃ ಪ್ರಶಸ್ತಿ ಪುರಸ್ಕೃತರನ್ನು ಮೆರವಣಿಗೆ ಮೂಲಕ ಕರೆತರಲಾಯಿತು.
ಬೆಂಗಳೂರು ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ. ಭೈರಮಂಗಲ ರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್. ಎಲ್. ಮಲ್ಲೇಶ್ ಗೌಡ, ತಹಸೀಲ್ದಾರ್ ಸೌಮ್ಯ, ಪೊಲೀಸ್ ಠಾಣಾಧಿಕಾರಿ ಸಿ.ಆರ್. ಕಾವ್ಯ, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ಇದ್ದರು.* ಹೇಳಿಕೆ1ಸರ್ಕಾರಗಳು ಹಲವು ಜಯಂತಿಗಳನ್ನು ಮಾಡುತ್ತದೆ. ಈ ಆಚರಣೆಯಿಂದ ಅಧಿಕಾರಿಗಳಿಗೆ ಲಾಭ. ಜನರು ಸೇರುವುದಿಲ್ಲ. ಹಾಗಾಗಿ ಎಲ್ಲಾ ಜಯಂತಿಗಳನ್ನು ಒಂದೇ ದಿನ ಆಚರಿಸುವಂತೆ ಸದನದಲ್ಲಿ ಪ್ರಸ್ತಾವನೆ ಸಲ್ಲಿಸುತ್ತೇನೆ. ಯುವ ಪೀಳಿಗೆ ಅನಕೃ ಅವರ ಪುಸ್ತಕಗಳನ್ನು ಹೆಚ್ಚು ಓದಿ ಅವರ ಕನ್ನಡಕ್ಕೆ ಅವರ ಶಕ್ತಿ ಏನು ಎಂಬುದನ್ನು ತಿಳಿಯಬೇಕು. ಎ. ಮಂಜು, ಶಾಸಕ