ಸಾರಾಂಶ
ಅಸ್ನೋಟಿಕರ್ ನಾಲಿಗೆ ಹೇಗೆ ಬೇಕೋ ಹಾಗೆ ಹೊರಳುತ್ತದೆ. ಕಾರವಾರ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿದ್ದಾಗಿ ಹೇಳುತ್ತಾರೆ. ಸತೀಶ ಸೈಲ್ ಶಾಸಕರಾಗಿ ಆರು ತಿಂಗಳಾಗಿದೆ. ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ? ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರಕ್ಕೆ ಅಸ್ನೋಟಿಕರ್ ಒಂದು ಶಾಪ ಇದ್ದಂತೆ ಎಂದು ಕಾರವಾರ-ಅಂಕೋಲಾದ ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಕಾರವಾರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಿಂದ ಕಪ್ಪಕಾಣಿಕೆ ಪಡೆದು ಚುನಾವಣಾ ಕಣದಿಂದ ಹೇಡಿಯಂತೆ ನಾಪತ್ತೆಯಾಗಿದ್ದ ಆನಂದ ಅಸ್ನೋಟಿಕರ್ ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಮತ್ತೆ ಹಳೆಯ ಚಾಳಿ ಮುಂದುವರಿಸಿದ್ದಾರೆ. ಕಾಂಗ್ರೆಸ್ ಬಿ ಟೀಮ್ ಆಗಿರುವ ಆನಂದ್ ಈ ಬಾರಿಯೂ ಚುನಾವಣೆಗೆ ಸ್ಪರ್ಧಿಸುವ ನಾಟಕ ಶುರುವಿಟ್ಟುಕೊಂಡಿದ್ದಾರೆ ಎಂದು ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ.
ಚುನಾವಣೆಯಲ್ಲಿ ಹಣ ವೆಚ್ಚ ಮಾಡಿ ಠೇವಣಿ ಕಳೆದುಕೊಳ್ಳುವುದಕ್ಕಿಂತ ಚುನಾವಣೆಗೆ ಸ್ಪರ್ಧಿಸುವಂತೆ ನಾಟಕ ಮಾಡಿ ಕಾಂಗ್ರೆಸ್‌ಗೆ ಬೆಂಬಲ ನೀಡಿ ಕಾಂಗ್ರೆಸ್ ಅಭ್ಯರ್ಥಿಯಿಂದ ಹಣ ಪಡೆಯುವ ಹೊಂಚು ಹಾಕಿದ್ದಾರೆ. ಆನಂದ್ ಅವರಿಗೆ ಜೆಡಿಎಸ್ ಬೇಕಾಗಿಲ್ಲ, ಬಿಜೆಪಿಯೂ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಕಾಂಗ್ರೆಸ್ ಹಿತಾಸಕ್ತಿ. ಕಾಂಗ್ರೆಸ್ ಏಜೆಂಟ್ ಆಗಿರುವ ಆನಂದ್ ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಗೊಂದಲ ಮೂಡಿಸಿ ಕಾಂಗ್ರೆಸ್‌ನಿಂದ ಗಂಟು ಪಡೆದು ಚುನಾವಣೆಯಿಂದ ಕಾಲುಕೀಳಲು ಟ್ರೇಲರ್ ಹೊರಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.ಈಗ ಪ್ರಧಾನಿ ನರೇಂದ್ರ ಮೋದಿ ಅವರ ಜಪ ಮಾಡುತ್ತಿದ್ದಾರೆ. ಮೋದಿ ಅವರನ್ನು ಎಲ್ಲಿಯೂ ಟೀಕಿಸಿಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಅದೇ ಮೋದಿ ನೇತೃತ್ವದಲ್ಲೇ ರೂಪಾಲಿ ಎಸ್. ನಾಯ್ಕ ಅವರಿಗೆ ಟಿಕೆಟ್ ನೀಡಲಾಗಿತ್ತು. ಮೋದಿ ಅವರೇ ಪ್ರಚಾರಕ್ಕೆ ಅಂಕೋಲಾಕ್ಕೆ ಬಂದರು. ಆಗ ಅಸ್ನೋಟಿಕರ್ ಎಲ್ಲಿ ನಾಪತ್ತೆಯಾಗಿದ್ದರು? ಎಂದಿದ್ದಾರೆ.
ಅಸ್ನೋಟಿಕರ್ ನಾಲಿಗೆ ಹೇಗೆ ಬೇಕೋ ಹಾಗೆ ಹೊರಳುತ್ತದೆ. ಕಾರವಾರ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿದ್ದಾಗಿ ಹೇಳುತ್ತಾರೆ. ಸತೀಶ ಸೈಲ್ ಶಾಸಕರಾಗಿ ಆರು ತಿಂಗಳಾಗಿದೆ. ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ? ಕಾರವಾರ ಅಂಕೋಲಾ ವಿಧಾನಸಭೆ ಕ್ಷೇತ್ರಕ್ಕೆ ಅಸ್ನೋಟಿಕರ್ ಒಂದು ಶಾಪ ಇದ್ದಂತೆ. ಚುನಾವಣೆ ಬರಲಿ ಆನಂದ್ ಬಣ್ಣ ಬಯಲಾಗಲಿದೆ ಎಂದು ಬಿಜೆಪಿಯ ಅಂಕೋಲಾ ಮಂಡಳ ಅಧ್ಯಕ್ಷ ಸಂಜಯ ನಾಯ್ಕ ಭಾವಿಕೇರಿ, ಮಂಡಳ ಪ್ರಧಾನ ಕಾರ್ಯದರ್ಶಿ ಮಾರುತಿ ಗೌಡ, ಮಂಡಳ ಪ್ರಧಾನ ಕಾರ್ಯದರ್ಶಿ ರಾಘು ಭಟ್, ಮಾಜಿ ಜಿಪಂ ಸದಸ್ಯ ಜಗದೀಶ ಮೊಗಟಾ, ಬೊಬ್ರುವಾಡ ಗ್ರಾಪಂ ಅಧ್ಯಕ್ಷ ಚಂದ್ರಕಾಂತ ನಾಯ್ಕ, ಕಾರವಾರ ನಗರ ಮಂಡಳ ಅಧ್ಯಕ್ಷ ನಾಗೇಶ ಕುರ್ಡೇಕರ, ಮಂಡಳ ಪ್ರಧಾನ ಕಾರ್ಯದರ್ಶಿ ಪ್ರದೀಪ ಗುನಗಿ, ನಾಗೇಶ ಕೇಣಿ, ಗ್ರಾಮೀಣ ಮಂಡಳದ ಸುಭಾಷ ಗುನಗಿ, ಪ್ರಧಾನ ಕಾರ್ಯದರ್ಶಿ ದತ್ತಾರಾಮ ಬಾಂದೇಕರ, ಚೆಂಡಿಯಾ ಗ್ರಾಪಂ ಮಾಜಿ ಅಧ್ಯಕ್ಷ ಜಿತೇಶ ಅರ್ಗೇಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.