ಕುಂದಾಪುರ: ರಿಲಯನ್ಸ್ ಗ್ರೂಪ್‌ನ ಮುಕೇಶ್ ಅಂಬಾನಿ ಅವರ ಪುತ್ರ ಅನಂತ ಅಂಬಾನಿ ಅವರು ಭಾನುವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರು, ವಿಶೇಷ ಭದ್ರತೆಯೊಂದಿಗೆ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ತಲುಪಿದರು. ದೇವಸ್ಥಾನಕ್ಕೆ ಆಗಮಿಸಿದ ಅನಂತ ಅಂಬಾನಿ ಅವರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅರ್ಚಕರು ಆತ್ಮೀಯ ಸ್ವಾಗತ ಕೋರಿದರು.ತಂತ್ರಿಗಳಾದ ರಾಮಚಂದ್ರ ಅಡಿಗ ಮತ್ತು ನಿತ್ಯಾನಂದ ಅಡಿಗ ಅವರ ಮಾರ್ಗದರ್ಶನದಲ್ಲಿ ಅರ್ಚಕರಾದ ವಿಘ್ನೇಶ್ ಅಡಿಗ ಹಾಗೂ ಸುರೇಶ್ ಭಟ್ ನೇತೃತ್ವದಲ್ಲಿ ಸಂಕಲ್ಪ, ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಬಳಿಕ ಅವರು ಮಂಗಳಾರತಿ ಸ್ವೀಕರಿಸಿ ದೇವಿಯ ಪ್ರಸಾದ ಪಡೆದರು.

ಶ್ರೀಕ್ಷೇತ್ರದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ ಅವರು ಅನಂತ ಅಂಬಾನಿ ಅವರನ್ನು ಸನ್ಮಾನಿಸಿ ದೇವರ ಪ್ರಸಾದ ನೀಡಿ ಗೌರವಿಸಿದರು.ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ. ಪಿ.ವಿ. ಅಭಿಲಾಷ್, ಯು. ರಾಜೇಶ್ ಕಾರಂತ್, ಆಲೂರು ರಘುರಾಮ ದೇವಾಡಿಗ, ಸುರೇಂದ್ರ ಶೆಟ್ಟಿ, ಧನಾಕ್ಷಿ ಪೂಜಾರಿ ಹಾಗೂ ಸುಧಾ ಬೈಂದೂರು ಇದ್ದರು.