ಕರ್ನಾಟಕದ ಮೇರುನಟ ಡಾ.ರಾಜ್ ಕುಮಾರ್ ನಂತರ ಕನ್ನಡದ 2ನೇ ನಟನಿಗೆ ಮೇರುಸಿನಿ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪ್ರತಿಭಾವಂತ ನಟ ಅನಂತ್ ನಾಗ್ ಭಾಜನರಾಗಿದ್ದಾರೆ. ಇದು ಇಡೀ ಕರ್ನಾಟಕ ಹೆಮ್ಮೆಪಡುವ ಸಂಗತಿಯಾಗಿದ್ದು, ಸೆ.22ರಂದು ಗುಜರಾತಲ್ಲಿ ನಡೆಯುವ ಸಮಾರಂಭದಲ್ಲಿ ಅನಂತ ನಾಗ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

- ಕೃಷ್ಣ ಮಾಸಡಿ ನಿರ್ದೇಶನದ ಅವಸ್ಥೆ ಮತ್ತು ನಂಬಿಕೆಗಳು ಚಲನಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕರ್ನಾಟಕದ ಮೇರುನಟ ಡಾ.ರಾಜ್ ಕುಮಾರ್ ನಂತರ ಕನ್ನಡದ 2ನೇ ನಟನಿಗೆ ಮೇರುಸಿನಿ ಪ್ರಶಸ್ತಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪ್ರತಿಭಾವಂತ ನಟ ಅನಂತ್ ನಾಗ್ ಭಾಜನರಾಗಿದ್ದಾರೆ. ಇದು ಇಡೀ ಕರ್ನಾಟಕ ಹೆಮ್ಮೆಪಡುವ ಸಂಗತಿಯಾಗಿದ್ದು, ಸೆ.22ರಂದು ಗುಜರಾತಲ್ಲಿ ನಡೆಯುವ ಸಮಾರಂಭದಲ್ಲಿ ಅನಂತ ನಾಗ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಹಲವಾರು ದಶಕಗಳ ಹಿಂದೆ ಅನಂತ ನಾಗ್ ಹೊನ್ನಾಳಿ ತಾಲೂಕಿನ ಹೆಸರಾಂತ ಸಾಹಿತಿ ಮತ್ತು ಚಿತ್ರ ನಿರ್ದೇಶಕ ಕೃಷ್ಣ ಮಾಸಡಿ ಅವರು ಅವಸ್ಥೆ ಮತ್ತು ನಂಬಿಕೆಗಳು ಹೆಸರಿನ ಚಿತ್ರಗಳ ಚಿತ್ರೀಕರಣ ಹೊನ್ನಾಳಿ ತಾಲೂಕಿನ ಸುತ್ತಮುತ್ತ ನಡೆಸಿದ್ದರು. ಈ ಸಂದರ್ಭ ನಟ ಅನಂತ ನಾಗ್ ಚಿತ್ರೀಕರಣಕ್ಕಾಗಿ ಹೊನ್ನಾಳಿಗೆ ಆಗಮಿಸಿದ್ದರು.

ಅವಸ್ಥೆಯು ಯು.ಆರ್. ಅನಂತಮೂರ್ತಿ ಅವರ ಕಾದಂಬರಿ ಅವಸ್ಥೆ ಆಧರಿಸಿದ ಸಿನಿಮಾ. ಹೊನ್ನಾಳಿ ತಾಲೂಕಿನ ಕೃಷ್ಣ ಮಾಸಡಿ ನಿರ್ದೇಶನದ ಈ ಚಿತ್ರ 1986ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ಉತ್ತಮ ನಟ, ಉತ್ತಮ ಕಥೆ ಹಾಗೂ ಉತ್ತಮ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಗಳಿಸಿದ್ದು ವಿಶೇಷ. ನಂಬಿಕೆಗಳು ಸಿನಿಮಾವು ಕೃಷ್ಣ ಮಾಸಡಿ ವಿರಚಿತ ಕತೆಯಾಗಿದ್ದು, 1992ರಲ್ಲಿ ಬಿಡುಗಡೆಯಾಗಿತ್ತು. ಈ ಎರಡೂ ಸಿನಿಮಾಗಳಲ್ಲಿ ಅನಂತ ನಾಗ್‌ ನಾಯಕ ನಟರಾಗಿ ನಟಿಸಿದ್ದರು.

ಹೊನ್ನಾಳಿಯ ಅಭಿವ್ಯಕ್ತಿ ಕಲಾ ತಂಡದ ಜಿ,ಎಸ್.ಬಸವರಾಜ್ (ಟೈಲರ್) ವಸ್ತ್ರಾಲಂಕಾರ ಮಾಡಿದ್ದು, ದಿವಂಗತ ಚಿದಾನಂದ ಮೂರ್ತಿ, ಕತ್ತಿಗೆ ನಾಗರಾಜ್, ಸಿದ್ದರಾಜು ಅವರು ಕೂಡ ಚಿತ್ರತಂಡದೊಂದಿಗೆ ಕೆಲಸ ಮಾಡಿದ್ದರು. ರಂಗಕರ್ಮಿ ಹೊನ್ನಾಳಿಯ ಪ್ರೇಮ್ ಕುಮಾರ್ ಭಂಡಿಗಡಿ ಅವರು ಕೃಷ್ಣ ಮಾಸಡಿ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಎಂದು ಅವರು ಜಿ.ಎಸ್‌.ಬಸವರಾಜ್‌ ಸ್ಮರಿಸಿದ್ದಾರೆ.

ನಟ ಅನಂತ ನಾಗ್ ಅವರಿಗೆ ಇದೀಗ ಪ್ರತಿಷ್ಟಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದೆ. ಈ ಸಂದರ್ಭದಲ್ಲಿ ಜಿ.ಎಸ್. ಬಸವರಾಜ್ ತಮ್ಮ ಬಳಿ ಇದ್ದ ಅಂದಿನ ಸಿನಿಮಾ ಚಿತ್ರೀಕರಣ ಸಂದರ್ಭದ ಫೋಟೋವನ್ನು ಸುದ್ದಿಗಾರರಿಗೆ ತೋರಿಸಿ, ತಮ್ಮ ಅಭಿವೃಕ್ತಿ ಕಲಾ ತಂಡದೊಂದಿಗೆ ಕೆಲಸ ಮಾಡಿದ್ದು ತಮಗೆ ಹೆಮ್ಮೆಯ ವಿಷಯವಾಗಿದೆ ಹಾಗೂ ಪ್ರಶಸ್ತಿಗೆ ಭಾಜನರಾಗಿರುವ ನಟ ಅನಂತ ನಾಗ್ ಅವರಿಗೆ ಹೊನ್ನಾಳಿ ತಾಲೂಕಿನ ಕಲಾವಿದರ ಬಳಗ ಹಾಗೂ ಜನತೆಯ ಪರವಾಗಿ ಅಭಿವಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

- - -

-18ಎಚ್.ಎಲ್.ಐ2: ಚಿತ್ರೀಕರಣ ಸಂದರ್ಭ ಅಭಿವ್ಯಕ್ತಿ ಕಲಾ ತಂಡದ ಜಿ.ಎಸ್. ಬಸವರಾಜ್ ಅವರು ಅನಂತ ನಾಗ್ ಅವರೊಂದಿಗಿದ್ದ ಫೋಟೋ.