ಸಾರಾಂಶ
ಧಾರವಾಡ:
ಆರು ದಶಕಗಳ ಕಾಲ ಸಂಗೀತ-ನೃತ್ಯ-ಸಾಂಸ್ಕೃತಿಕ ಲೋಕದಲ್ಲಿ ಕಲಾವಿದರು ಹಾಗೂ ಶ್ರೋತೃವರ್ಗದ ಕೊಂಡಿಯಾದ ಅನಂತ ಹರಿಹರ ಧಾರವಾಡ ಸಂಗೀತ’ದ ಪರಿಚಾರಕರ ಹೌದು. ಈ ಹಿನ್ನೆಲೆಯಲ್ಲಿ ಅವರಿಗೆ ಧಾರವಾಡದ ಯುವ-ಪ್ರಬುದ್ಧ ಕಲಾವಿದರು ಆ. 23ರಿಂದ ಮೂರು ದಿನ ಸಂಗೀತೋತ್ಸವದ ಮೂಲಕ ನಮನ ಸಲ್ಲಿಸಲಿದ್ದಾರೆ.ಇಲ್ಲಿಯ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ ಹಾಗೂ ಹುಬ್ಬಳ್ಳಿಯ ಕ್ಷಮತಾ ಸಂಸ್ಥೆ ಜಂಟಿಯಾಗಿ ‘ಅನಂತ ಸ್ವರ ನಮನ’ ಮೂರು ದಿನಗಳ ಈ ಸಂಗೀತೋತ್ಸವ ಆಯೋಜಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಭಾಭವನದಲ್ಲಿ ಆ. 23, 24 ಹಾಗೂ 25ರಂದು ಪ್ರತಿದಿನ ಸಂಜೆ ಗಾಯನ-ವಾದನಗಳ ನಿನಾದ ರಿಂಗಣಿಸಲಿದೆ. ಆ. 23ರಂದು ಸಂಜೆ 5ಕ್ಕೆ ಸಂಗೀತೋತ್ಸವದ ಉದ್ಘಾಟನೆ ಜರುಗಲಿದ್ದು, ಪದ್ಮಶ್ರೀ ಎಂ. ವೆಂಕಟೇಶಕುಮಾರ, ಪಂ. ಗಣಪತಿ ಭಟ್ ಹಾಸಣಗಿ, ಪಂ. ಶ್ರೀನಿವಾಸ ಜೋಶಿ, ಪಂ. ಕೈವಲ್ಯಕುಮಾರ ಗುರವ, ಶಾಸಕ ಅರವಿಂದ ಬೆಲ್ಲದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಹಾಗೂ ಸಂಚಾಲಕ ಗೋವಿಂದ ಜೋಶಿ ಪಾಲ್ಗೊಳ್ಳಲಿದ್ದಾರೆ.
ಆ. 25ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಈರೇಶ ಬ ಅಂಚಟಗೇರಿ, ಪಂ. ಶ್ರೀಪಾದ ಹೆಗಡೆ ಕಂಪ್ಲಿ ಹಾಗೂ ಹಿರಿಯ ವಯೋಲಿನ್ ವಾದಕ ಪಂ. ಬಿ.ಎಸ್. ಮಠ ಭಾಗವಹಿಸಲಿದ್ದಾರೆ. ಆ. 23ರಂದು ಹುಬ್ಬಳ್ಳಿಯ ಸುಜಯೀಂದ್ರ ಕುಲಕರ್ಣಿ, ಹುಬ್ಬಳ್ಳಿ-ನವನಗರದ ಶುಭಾಂಗಿ ಜಾಧವ, ಧಾರವಾಡದ ಡಾ. ವಿಜಯಕುಮಾರ ಪಾಟೀಲ ಅವರಿಂದ ಗಾನಸುಧೆ ಹರಿದುಬರಲಿದೆ. ಆ. 24ರಂದು ಹುಬ್ಬಳ್ಳಿಯ ಪಂ. ಕೃಷ್ಣೇಂದ್ರ ವಾಡೀಕರ ಹಾಗೂ ಧಾರವಾಡದ ಅಯ್ಯಪ್ಪಯ್ಯ ಹಲಗಲಿಮಠ ಅವರ ಗಾಯನ ಬೆಂಗಳೂರಿನ ಸರಫಪಾದ ಖಾನ್ ಅವರ ಸಾರಂಗಿ ವಾದನ ಹಾಗೂ ವೀಣಾ ಮಠ ಅವರಿಂದ ವಯೋಲಿನ್ ವಾದನ ಝೇಂಕರಿಸಲಿದೆ. ಆ. 25ರಂದು ಗಾಯನ ಹಾಗೂ ಸಿತಾರ ವಾದನಗಳ ನಿನಾದ ಹರಿದುಬರಲಿದೆ. ಹುಬ್ಬಳ್ಳಿ ನಿಖಿಲ್ ಜೋಶಿ, ಧಾರವಾಡದ ಉ. ಮೊಹಸೀನ್ ಖಾನ್ ಅವರಿಂದ ಸಿತಾರವಾದನ ಹಾಗೂ ಬೆಂಗಳೂರಿನ ಶಿವಾನಿ ಮಿರಜಕರ ಜೈನ್ ಹಾಗೂ ಧಾರವಾಡದ ಕುಮಾರ ಮರಡೂರ ಅವರಿಂದ ಗಾನಸುಧೆ ರಿಂಗಣಿಸಲಿದೆ.ಮೂರು ದಿನಗಳ ಈ ಸಂಗೀತೋತ್ಸವದಲ್ಲಿ ಬೆಂಗಳೂರಿನ ಕೇಶವ ಜೋಶಿ, ಧಾರವಾಡದ ಉ. ನಿಸ್ಸಾರ್ ಅಹ್ಮದ್, ಶ್ರೀಧರ ಮಾಂಡ್ರೆ, ಡಾ. ಶ್ರೀಹರಿ ದಿಗ್ಗಾವಿ, ಜಯತೀರ್ಥ ಪಂಚಮುಖಿ, ಅಕ್ಷಯ ಭಟ್ಟ, ಹೇಮಂತ ಜೋಶಿ ತಬಲಾ ಸಾಥ್ ನೀಡಲಿದ್ದಾರೆ. ಸತೀಶ ಭಟ್ಟ ಹೆಗ್ಗಾರ, ಸಾರಂಗ ಕುಲಕರ್ಣಿ, ಬಸವರಾಜ ಹಿರೇಮಠ, ವಿನೋದ ಪಾಟೀಲ ಅವರು ಹಾರ್ಮೋನಿಯಂ ಸಾಥ್ ಸಂಗತ್ ಮಾಡಲಿದ್ದಾರೆ. ಮೂರು ದಿನಗಳ ಸಂಗೀತೋತ್ಸವದ ನೇರಪ್ರಸಾರವನ್ನು https://www.facebook.com/vividlipi/live ಹಾಗೂ https://www.youtube.com/vividlipi/live ಮಾಡಲಿವೆ ಎಂದು ಪ್ರಕಟಣೆ ತಿಳಿಸಿದೆ.