ಸಾರಾಂಶ
ಬಿಜೆಪಿಗರಿಗೆ ಸಂವಿಧಾನದ ಮೇಲೆ ಎಳ್ಳಷ್ಟೂ ನಂಬಿಕೆ ಇಲ್ಲ. ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡ ಈ ಬಿಜೆಪಿಗರು, ದೇಶದ ಆಡಳಿತ ನಡೆಸಲು ಅನರ್ಹರು.
ಚಿಕ್ಕಬಳ್ಳಾಪುರ: ಅಂಬೇಡ್ಕರ್ ರಚಿಸಿದ ಭಾರತದ ಸಂವಿಧಾನ ಬದಲಾವಣೆಗಾಗಿಯೇ 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400 ಸ್ಥಾನಗಳನ್ನು ಗೆಲ್ಲಿಸುತ್ತಾರೆ ಎಂದು ಉತ್ತರ ಕನ್ನಡ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ವಿರುದ್ಧ ಎನ್.ಎಸ್.ಯು.ಐ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಎನ್ಎಸ್ ಯುಐ ಸಂಘಟನೆ ಕಾರ್ಯಕರ್ತರು, ಉತ್ತರ ಕನ್ನಡ ಕ್ಷೇತ್ರದ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರನ್ನು ಆನೆಗೆ ಹೋಲಿಸಿ ಮಾಧ್ಯಮದವರನ್ನು ನಾಯಿಗಳೆಂದು ಜರಿದ ಸಂಸದನ ವಿರುದ್ಧ ಧಿಕ್ಕಾರಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.ಎನ್ಎಸ್ ಯುಐ ಕಾರ್ಯಕರ್ತರನ್ನುದ್ದೇಶಿಸಿ ಜಿಲ್ಲಾಧ್ಯಕ್ಷ ಪ್ರಸನ್ನ ಮಾತನಾಡಿ, ಬಿಜೆಪಿಗರಿಗೆ ಸಂವಿಧಾನದ ಮೇಲೆ ಎಳ್ಳಷ್ಟೂ ನಂಬಿಕೆ ಇಲ್ಲ. ಸಂವಿಧಾನದ ಮೇಲಿನ ನಂಬಿಕೆ ಕಳೆದುಕೊಂಡ ಈ ಬಿಜೆಪಿಗರು, ದೇಶದ ಆಡಳಿತ ನಡೆಸಲು ಅನರ್ಹರು. ಪ್ರಧಾನಿ ಮೋದಿ ಇಂತಹ ನಾಲಾಯಕ್ ರನ್ನು ಪಕ್ಷದಿಂದ ಕಿತ್ತೊಗೆಯಬೇಕು. ಸಂವಿಧಾನದ ತಂಟೆಗೆ ಬಂದರೆ ರಕ್ತಪಾತವಾಗುವುದು ಖಚಿತ, ಇಂತಹ ವ್ಯಕ್ತಿಗಳಿಗೆ ಟಿಕೆಟ್ ನೀಡಿರುವ ಪ್ರಧಾನಿ ನರೇಂದ್ರಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ, ಆತನ ವಿರುದ್ಧ ಕ್ರಮ ಜರುಗಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಗೆ ನೈತಿಕತೆಯಿದ್ದಲ್ಲಿ ಅನಂತ್ ಕುಮಾರ್ ಹೆಗಡೆ ಅವರನ್ನು ಪಕ್ಷದಿಂದ ಮತ್ತು ಸಂಸತ್ ಸ್ಥಾನದಿಂದ ಉಚ್ಛಾಟಿಸಲಿ ಎಂದು ಒತ್ತಾಯಿಸಿದರು.ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶ್ರೀನಿವಾಸ್ ಮಾತನಾಡಿದರು.
ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸಿದ ಎನ್ ಎಸ್ ಯುಐ ಮತ್ತು ಕಾಂಗ್ರೆಸ್ ಕಾರ್ಯಕರ್ತರು, ಅನಂತ್ ಕುಮಾರ್ ಹೆಗಡೆ ಬಂಧನಕ್ಕೆ ಆಗ್ರಹಿಸಿದರು. ದೇಶದ್ರೋಹಿ ಬಿಜೆಪಿ, ಸಂವಿಧಾನ ವಿರೋಧಿ ಬಿಜೆಪಿ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.