ಅನಂತ್ ಕುಮಾರ್ ಹೆಗಡೆ ಚಾಲಕ, ಗನ್ ಮ್ಯಾನ್‌ಗೆ ಬಂಧನ, ಜಾಮೀನು

| Published : Jun 25 2025, 01:17 AM IST

ಸಾರಾಂಶ

ಪ್ರಕರಣದಲ್ಲಿ ಭಾಗಿಯಾದ ಗನ್‌ಮ್ಯಾನ್ ಶ್ರೀಧರ್ ಮತ್ತು ಚಾಲಕ ಮಹೇಶ್ ಶೆಟ್ಟಿ ಬಂಧಿಸಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ,

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಕಾರುಗಳ ಓವರ್ ಟೇಕ್ ವಿಚಾರದಲ್ಲಿ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ಕಾರು ಚಾಲಕ ಮತ್ತು ಗನ್‌ಮ್ಯಾನ್ ಬಂಧನವಾಗಿದ್ದು, ನೆಲಮಂಗಲ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಮಂಗಳವಾರ ವಿಚಾರಣೆ ನಡೆದು ಇಬ್ಬರಿಗೂ ಜಾಮೀನು ಮಂಜೂರಾಗಿದೆ.ರಾಷ್ಟ್ರೀಯ ಹೆದ್ದಾರಿ 48ರ ಹಳೇ ನಿಜಗಲ್ ಬಳಿಯ ಶುತ್ತಾರಿಯಾ ಕಾಲೇಜ್ ಮುಂಭಾಗ ಘಟನೆ ನಡೆದಿದ್ದು, ಹೋಬಳಿಯ ಹಾಲೇನಹಳ್ಳಿ ಗ್ರಾಮದ ಸಲ್ಮಾನ್ (30), ಸೈಫ್ (28), ಇಲಿಯಾಜ್ (50), ಗುಲ್ಸರ್ ಉನ್ನೀಸ್ಸಾ (45) ಮೇಲೆ ಹಲ್ಲೆಯಾಗಿತ್ತು.ಬಿಗಿ ಬಂದೋಬಸ್ತ್ : ದಾಬಸ್‍ಪೇಟೆ ಪೊಲೀಸ್ ಠಾಣೆಯ ಮುಂಭಾಗ ಯಾವುದೇ ಅನಾಹುತವಾಗದಂತೆ ಮುಂಜಾಗ್ರತಾ ಕ್ರಮವಾಗಿ ಮಂಗಳವಾರ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ತನಿಖೆ ಮುಂದುವರೆದಿದೆ: ದಾಬಸ್‍ಪೇಟೆ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ಎಎಸ್ಪಿ ನಾಗರಾಜ್ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿ, ತನಿಖೆ ಮುಂದುವರೆಸಿದ್ದೇವೆ, ಪ್ರಕರಣದಲ್ಲಿ ಭಾಗಿಯಾದ ಗನ್‌ಮ್ಯಾನ್ ಶ್ರೀಧರ್ ಮತ್ತು ಚಾಲಕ ಮಹೇಶ್ ಶೆಟ್ಟಿ ಬಂಧಿಸಲಾಗಿದೆ. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ, ತನಿಖೆ ಮುಂದುವರೆಸುತ್ತೇವೆ. ಮಾಜಿ ಸಂಸದ ಅನಂತಕುಮಾರ್ ಹೆಗಡೆ ಮೇಲೆ ಪ್ರಕರಣ ದಾಖಲಾಗಿದೆ. ಈಗಾಗಲೇ ತನಿಖೆಗೆ ಸಹಕರಿಸುವಂತೆ ನೋಟೀಸ್ ನೀಡಲಾಗಿದೆ. ಅದರಂತೆ ಮಾಜಿ ಸಂಸದರು ನಿನ್ನೆ ಹೇಳಿಕೆ ನೀಡಿದ್ದಾರೆ. ಘಟನೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ವಿಡಿಯೋ ಲಭ್ಯವಿದ್ದು, ವಿಡಿಯೋ ಆಧಾರದ ಮೇಲೆ ತನಿಖೆ ನಡೆಸುತ್ತಿದ್ದೇವೆ ಎಂದರು.ಒತ್ತಾಯ : ಮಾಜಿ ಸಂಸದರ ಬಂಧನವಾಗಬೇಕು ಎಂದು ಗಾಯಾಳು ಸಲ್ಮಾನ್ ದೊಡ್ಡಪ್ಪ ಹಾಲೇನಹಳ್ಳಿ ನಯಾಜ್ ಖಾನ್ ಠಾಣೆ ಬಳಿ ಆಗ್ರಹಿಸಿ, ಅಧಿಕಾರ ಇದೆ ಎಂದು ಅವರಿಗೊಂದು ನ್ಯಾಯ ನಮಗೊಂದು ನ್ಯಾಯಾನಾ? ಬೆಳಗ್ಗೆಯಿಂದ ಠಾಣೆ ಬಳಿ ಕಾಯುತ್ತಿದ್ದೇವೆ, ಇಬ್ಬರನ್ನು ವಶಕ್ಕೆ ಪಡೆದಿದ್ದೇವೆ ಎನ್ನುತ್ತಿದ್ದಾರೆ ಪೊಲೀಸರು. ಬಂಧಿತರು ಯಾರೂ ಕೂಡ ಪೊಲೀಸ್ ಠಾಣೆ ಬಳಿ ಬಂದಿಲ್ಲ ಪೊಲೀಸರು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಹೋರಾಟ ಮಾಡುತ್ತೇವೆ ಎಂದರು.

ಇಬ್ಬರು ವಕೀಲರಿಂದ ವಾದ:

ಕೋರ್ಟ್‍ನಲ್ಲಿ ಗನ್‌ಮ್ಯಾನ್ ಹಾಗೂ ಡ್ರೈವರ್ ಪರ ವಕೀಲ ನಾಗೇಂದ್ರ, ಕೆಡಿಎಂ ನಾಯಕ್‌ರಿಂದ ಸುಳ್ಳು ದೂರು ದಾಖಲು ಮಾಡಿ ಅನಂತ್ ಕುಮಾರ್ ಅವರು ಆರು ಬಾರಿ ಸಂಸದರಾಗಿದ್ದು, ವರ್ಚಸ್ಸು ಇದೆ ಇದನ್ನು ತೇಜೋವಧೆ ಮಾಡಲು ಈ ರೀತಿ ಮಾಡಲಾಗಿದೆ ಎಂದು ವಾದಿಸಿದರು. ಸರ್ಕಾರಿ ಅಭಿಯೋಜಕರು ಹಲ್ಲೆ ವಿಡಿಯೋ ಸಾಕ್ಷಿ ಸಿಕ್ಕಿರುವುದರಿಂದ ಬಂಧನ ಮಾಡಲಾಗಿದೆ ಎಂದು ವಾದಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶೆ ಪೂಜಾ ಶೆಟ್ಟಿ, ನೋಟಿಸ್ ಕೊಡದೆ ಇಬ್ಬರನ್ನೂ ಬಂಧನ ಮಾಡಿದ್ದಾರೆ. 112ಕ್ಕೆ ಕರೆ ಬಂದ ತಕ್ಷಣ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ, ಎಫ್‌ಐಆರ್ ದಾಖಲಾಗುವ ಮುನ್ನ ಬಂಧನ ತೋರಿಸಿದ್ದಾರೆ ಹಾಗಾಗಿ ಜಾಮೀನು ಮಂಜೂರು ಮಾಡಿದ್ದಾರೆ.ಹಾಜರಾಗುವಂತೆ ನೋಟೀಸ್: ಸದ್ಯ ಗನ್ ಮ್ಯಾನ್ ಶ್ರೀಧರ್ ಹಾಗೂ ಡ್ರೈವರ್ ಮಹೇಶ್ಗೆ ಮಾತ್ರ ಜಾಮೀನು ಮಂಜೂರಾಗಿದ್ದು, ಅನಂತ್ ಕುಮಾರ್ ಹೆಗ್ಗಡೆಗೆ ಜಾಮೀನು ಅರ್ಜಿ ಹಾಕದ ಹಿನ್ನೆಲೆ ಅನಂತ್ ಕುಮಾರ್ ಹೆಗ್ಗಡೆ ವಿಚಾರಣೆಗೆ ಇಂದು ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಪೋಟೋ 8 : ದಾಬಸ್‍ಪೇಟೆ ಪೊಲೀಸ್ ಠಾಣೆ