ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ಕೈಜೋಡಿಸಲು ಅನಂತಮೂರ್ತಿ ಹೆಗಡೆ ಮನವಿ

| Published : Oct 17 2024, 12:09 AM IST

ಶಿರಸಿ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ಕೈಜೋಡಿಸಲು ಅನಂತಮೂರ್ತಿ ಹೆಗಡೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರೂ ಶಿರಸಿ ಜಿಲ್ಲೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಮೆಡಿಕಲ್ ಹಾಗೂ ಎಂಜಿನಿಯರಿಂಗ್‌ ಕಾಲೇಜು ಬರಬೇಕು. ನಮ್ಮೂರಿನ ಯುವಕರು ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೋರಾಟಗಾರರು ಮನವಿ ಮಾಡಿದರು.

ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಯಾದರೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣವಾಗುತ್ತದೆ. ಈ ಹಿನ್ನೆಲೆ ಪ್ರತ್ಯೇಕ ಜಿಲ್ಲೆಯ ಹೋರಾಟಕ್ಕೆ ವೇಗ ನೀಡಲು ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕೈಜೋಡಿಸಬೇಕು ಎಂದು ಹೋರಾಟಗಾರ ಅನಂತಮೂರ್ತಿ ಹೆಗಡೆ ಮನವಿ ಮಾಡಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹೋರಾಟ ಹಾಗೂ ಪಾದಯಾತ್ರೆ ಹಮ್ಮಿಕೊಂಡು, ಸರ್ಕಾರವನ್ನು ಎಚ್ಚರಿಸಲಾಗಿದೆ. ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ ಅವರನ್ನು ಭೇಟಿಯಾಗಿ ವಿನಂತಿಸಲಾಗಿತ್ತು. ಆದರೆ ಜಿಲ್ಲೆಗೆ ಒಂದು ಮೆಡಿಕಲ್ ಕಾಲೇಜು ಎಂದು ತಿಳಿಸಿದ್ದರು. ಈ ಕಾರಣದಿಂದ ಶಿರಸಿ ಪ್ರತ್ಯೇಕ ಜಿಲ್ಲೆಯಾಗಬೇಕು. ಈ ಹಿನ್ನೆಲೆ ಹೋರಾಟಕ್ಕೆ ವೇಗ ನೀಡಲು ಘಟ್ಟದ ಮೇಲಿನ ಸಮಾನ ಮನಸ್ಕರ ಸಂಘಟನೆಗಳ ಬೆಂಬಲ ಯಾಚಿಸಿದ್ದೇವೆ. ಅವರೆಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿ, ಬೆಂಬಲ ಸೂಚಿಸಿದ್ದಾರೆ. ಶಿರಸಿಯಲ್ಲಿ ೨೫೦ ಹಾಸಿಗೆಯ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಮೆಡಿಕಲ್ ಕಾಲೇಜು ಇದ್ದಾಗ ನುರಿತ ವೈದ್ಯರು ಉಪನ್ಯಾಸಕರಾಗಿ ಬರುತ್ತಾರೆ. ಆದ್ದರಿಂದ ವೈದ್ಯರ ಕೊರತೆ ತಪ್ಪಲಿದೆ ಎಂದರು.ಕಳೆದ ೩೦ ವರ್ಷಗಳ ಹಿಂದಿನಿಂದಲೂ ಶಿರಸಿ ಜಿಲ್ಲೆಯಾಗಬೇಕೆಂದು ಹೋರಾಟ ಮಾಡಿದ್ದರು. ಈಗ ಪುನಃ ಶಕ್ತಿ ತುಂಬುವ ದೃಷ್ಟಿಯಿಂದ ಶಿರಸಿ ಜಿಲ್ಲೆಯ ಹೋರಾಟ ಕಾವು ಪಡೆದುಕೊಂಡಿದೆ. ಈಗ ಅವಕಾಶವಿದೆ ಎಂದು ಹಿರಿಯರು ಹೇಳಿದ್ದಾರೆ. ಹಿಂದೆ ಹೋರಾಟ ಮಾಡಿರುವವರನ್ನು ಸಂಪರ್ಕಿಸಿದ್ದೇವೆ. ಶಾಸಕ ಭೀಮಣ್ಣ ನಾಯ್ಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉಪೇಂದ್ರ ಪೈ ಸೇರಿದಂತೆ ಇನ್ನಿತರ ಜನಪ್ರತಿನಿಧಿಗಳನ್ನು, ಘಟ್ಟದ ಮೇಲಿನ ಎಲ್ಲ ತಾಲೂಕಿನ ವಿವಿಧ ಸಂಘಟನೆಗಳನ್ನು ಸಂಪರ್ಕಿಸಿ, ಪಕ್ಷಾತೀತ ಹೋರಾಟ ಮಾಡುತ್ತಿದ್ದೇವೆ. ಯಲ್ಲಾಪುರ, ಸಿದ್ದಾಪುರ, ಮುಂಡಗೋಡ, ಜೋಯಿಡಾ, ಹಳಿಯಾಳ, ದಾಂಡೇಲಿ ತಾಲೂಕುಗಳಿಗೆ ಭೇಟಿ ನೀಡಿ ಹೋರಾಟದ ರೂಪುರೇಷೆ ಮಾಡಲಾಗುವುದು ಎಂದರು.ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಎಂ.ಎಂ. ಭಟ್ಟ ಕಾರೇಕೊಪ್ಪ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಶಿರಸಿ ಜಿಲ್ಲೆಯಾಗಬೇಕು ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದೇವೆ. ಪ್ರತಿಯೊಬ್ಬರೂ ಶಿರಸಿ ಜಿಲ್ಲೆ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಮೆಡಿಕಲ್ ಹಾಗೂ ಎಂಜಿನಿಯರಿಂಗ್‌ ಕಾಲೇಜು ಬರಬೇಕು. ನಮ್ಮೂರಿನ ಯುವಕರು ಇಲ್ಲಿಯೇ ಬದುಕು ಕಟ್ಟಿಕೊಳ್ಳಬೇಕು. ಈ ಹೋರಾಟದಲ್ಲಿ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ವಿನಂತಿಸಿದರು.ನಿವೃತ್ತ ಸರ್ಕಾರಿ ನೌಕರ ವಿ.ಎಂ. ಭಟ್ಟ ಮಾತನಾಡಿ, ಘಟ್ಟದ ಮೇಲಿನ ನೌಕರರಲ್ಲಿ ಶಿರಸಿ ಜಿಲ್ಲೆಯಾಗಬೇಕು ಎಂಬ ಭಾವನೆ ಇದೆ. ಶಿರಸಿಗೆ ಜಿಲ್ಲೆಯ ಸ್ಥಾನಮಾನ ಸಿಗಬೇಕು ಎಂಬುದು ಹಿರಿಯ ಅಧಿಕಾರಿಗಳ ಆಶಯವಾಗಿದೆ. ಶಿರಸಿ ಜಿಲ್ಲೆಯಾದರೆ ಕಚೇರಿಗಳಿಗೆ ಜಾಗದ ಸಮಸ್ಯೆಯೂ ಇಲ್ಲ. ಜಿಲ್ಲೆ ಘೋಷಣೆ ವೆಚ್ಚದಾಯಕವೂ ಅಲ್ಲ. ಆರ್ಥಿಕ ಹಾಗೂ ಮೂಲ ಸಮಸ್ಯೆಗಳಿಲ್ಲ. ಈ ಕಾರಣ ಶಿರಸಿ ಜಿಲ್ಲೆಯಾಗಲು ಸೂಕ್ತವಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎನ್. ಹೆಗಡೆ ದೊಡ್ನಳ್ಳಿ, ಸಿ.ಎಸ್. ಗೌಡ ಸಿದ್ದಾಪುರ, ಶೋಭಾ ನಾಯ್ಕ, ಶಿವಾನಂದ ದೇಶಳ್ಳಿ, ದೀಪಕ ಕಾನಡೆ, ಸಂತೋಷ ನಾಯ್ಕ ಬ್ಯಾಗದ್ದೆ, ಚಿದಾನಂದ ಹರಿಜನ, ಗಣಪತಿ ನಾಯ್ಕ ಮತ್ತಿತರರು ಇದ್ದರು.