ಸಾರಾಂಶ
- ಮೈಸೂರು ವಿವಿ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ----ಕನ್ನಡಪ್ರಭ ವಾರ್ತೆ ಮೈಸೂರುಸ್ವತಂತ್ರ ನಿರ್ಧಾರದಿಂದ ಉನ್ನತ ಶಿಕ್ಷಣ ಪಡೆಯಲು ಬಂದಿರುವ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಿದ್ದು ಜೀವನ ಹಾಳು ಮಾಡಿಕೊಳ್ಳಬೇಡಿ. ಒಳ್ಳೆಯ ಅಭ್ಯಾಸದೊಂದಿಗೆ ಜೀವನ ರೂಪಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಸಲಹೆ ನೀಡಿದರು.ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಮೈಸೂರು ವಿಶ್ವವಿದ್ಯಾಲಯದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮಂಗಳವಾರ ಆಯೋಜಿಸಿದ್ದ ಅಭಿವಿನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ನಾತಕೋತ್ತರ ವಿಭಾಗಕ್ಕೆ ಬರುವ ಅನೇಕರು ಜೀವನದಲ್ಲಿ ಪ್ರಥಮ ಬಾರಿ ತಮ್ಮ ಸ್ವಂತ ನಿರ್ಧಾರದಿಂದ ವಿಷಯದ ಆಯ್ಕೆ ಮಾಡಿರುತ್ತಾರೆ. ಇಲ್ಲಿ ಬಂದಾಗ ನಗರದ ಆಕರ್ಷಣೆಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳದೆ, ನಿಮಗೆ ದೊರೆಯುವ ಸಂಪರ್ಕ ಹಾಗೂ ಅನುಭವ ಬಳಸಿ ಸಾಧನೆಯ ಹಾದಿಯಲ್ಲಿ ಸಾಗುವಂತೆ ಕಿವಿಮಾತು ಹೇಳಿದರು.ಉನ್ನತ ಶಿಕ್ಷಣದಿಂದ ನಿಮ್ಮ ಮುಂದಿನ ಜೀವನ, ವೃತ್ತಿ, ಭವಿಷ್ಯ ಎಲ್ಲವೂ ನಿರ್ಧಾರವಾಗುತ್ತದೆ. ಹೀಗಾಗಿ, ಓದಿ ಒಳ್ಳೆಯ ಹುದ್ದೆಗೆ ಹೋಗುವ ಮೂಲಕ ರಾಜ್ಯ ಮತ್ತು ದೇಶಕ್ಕೆ ಒಳ್ಳೆಯ ಹೆಸರನ್ನು ತರುವಂತೆ ಅವರು ಕರೆ ನೀಡಿದರು. ಓದಿನ ಕಡೆ ಗಮನ ಕೊಡಿನಗರ ಪೊಲೀಸ್ಆಯುಕ್ತೆ ಸೀಮಾ ಲಾಟ್ಕರ್ಮಾತನಾಡಿ, ಸಾಮಾಜಿಕ ಜಾಲತಾಣ ದುರುಪಯೋಗಪಡಿಸಿಕೊಂಡು ತೊಂದರೆ ನೀಡುವ ಬಗ್ಗೆ ಪ್ರತಿದಿನ 500 ಹೆಚ್ಚಿನ ದೂರುಗಳು ಬರುತ್ತಿವೆ. ಹೀಗಾಗಿ, ವಿದ್ಯಾರ್ಥಿಗಳು ಮೊಬೈಲ್ಬಳಕೆಯ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ನಮ್ಮ ಭವಿಷ್ಯ ನಿರ್ಧರಿಸುವ ಸ್ನಾತಕೋತ್ತರ ಕಲಿಕೆಗೆ ಬಂದಿರುವುದನ್ನು ನೆನಪಿನಲ್ಲಿಟ್ಟುಕೊಂಡು ಓದಿನ ಕಡೆಗೆ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.ತಂತ್ರಜ್ಞಾನ ಯುಗದಲ್ಲಿ ಸಾಮಾಜಿಕ ಜಾಲತಾಣದಿಂದ ಉಪಯೋಗದ ಜೊತೆಗೆ ಅನೇಕ ತೊಂದರೆಗಳೂ ಇವೆ. ಸಮಾಜದಲ್ಲಿ ಅನೇಕ ಪ್ರಕರಣಗಳಲ್ಲಿ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡು ಕೆಲಸ ಮಾಡುವ ಸನ್ನಿವೇಶಗಳನ್ನು ಗಮನಿಸುತ್ತಿದ್ದು, ವಿದ್ಯಾರ್ಥಿಗಳು ಆ ರೀತಿಯ ಷಡ್ಯಂತ್ರಕ್ಕೆ ಬಳಿಯಾಗದೆ ವಿದ್ಯಾಭ್ಯಾಸದ ಕಡೆಗೆ ಗಮನಹರಿಸಬೇಕು ಎಂದರು.ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ, ಐಕ್ಯುಎಸಿ ನಿರ್ದೇಶಕ ಪ್ರೊ.ಕೆ.ಎನ್. ಅಮೃತೇಶ್, ಆಡಳಿತಾಧಿಕಾರಿ ಪ್ರೊ.ಎಸ್.ಟಿ. ರಾಮಚಂದ್ರ ಇದ್ದರು. ಸಂಯೋಜಕ ಡಾ.ಜೆ. ಲೋಹಿತ್ ನಿರೂಪಿಸಿದರು.----ಕೋಟ್...ನಿಮ್ಮ ಸ್ಪರ್ಧೆ ನಿಮ್ಮೊಂದಿಗೆ ಇರಲಿ. ದಿನದಿಂದ ದಿನಕ್ಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಗುರಿ, ಓದಿನ ಯೋಜನೆ ರೂಪಿಸಿಕೊಳ್ಳಿ. ನಿಮ್ಮ ಬಲ, ದೌರ್ಬಲ್ಯವನ್ನು ಗುರುತಿಸಿಕೊಂಡು ಸರಿಪಡಿಸಿಕೊಳ್ಳಿ. ದಿನ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ.- ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ