ಹರವು ದೇಗುಲದ ಪ್ರಾಚೀನ ಸ್ಮಾರಕ ಸುತ್ತಲೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೈಟೆಕ್ ಕಾಂಪೌಂಡ್ ನಿರ್ಮಾಣಕ್ಕೆ 1.40 ಕೋಟಿ ರು. ಮಂಜೂರಾಗಿದ್ದು, ಫೆಬ್ರವರಿಗೆ ಕಾಮಗಾರಿ ಆರಂಭವಾಗಲಿದೆ. ಜತೆಗೆ ವೀರಗಲ್ಲು, ಮಾಸ್ತಿಗಲ್ಲು ಪಾರ್ಕ್ ನಿರ್ಮಾಣವಾಗಲಿದೆ. ಇದಾದರೆ ಇಡೀ ರಾಜ್ಯದಲ್ಲೇ ಹರವು ಗ್ರಾಮದ ಪ್ರಾಚೀನ ಸ್ಮಾರಕವು ವೀರಗಲ್ಲು, ಮಾಸ್ತಿಗಲ್ಲು ಪಾರ್ಕ್ ಹೊಂದಿರುವ ಪ್ರಥಮ ಸ್ಮಾರಕವಾಗಲಿದೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರಾಚೀನ ಸ್ಮಾರಕಗಳು ಧಾರ್ಮಿಕ, ಸಾಂಸ್ಕೃತಿಕ ಕೇಂದ್ರವಾಗಬೇಕು. ಅಲ್ಲಿ ಲಲಿತ ಕಲೆಗಳು ವಿಜೃಂಭಿಸಿದಾಗ ಮಾತ್ರ ನಮ್ಮ ಪೂರ್ವಿಕರ ಆಶಯಗಳಿಗೆ ಅರ್ಥ ಸಿಗಲಿದೆ ಎಂದು ಪ್ರಾಚೀನ ಸ್ಮಾರಕ ಸಂರಕ್ಷಣೆ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರವು ದೇವೇಗೌಡ ಹೇಳಿದರು.ತಾಲೂಕಿನ ಹರವು ಗ್ರಾಮದ ಪ್ರಾಚೀನ ಸ್ಮಾರಕ ಶ್ರೀರಾಮ ದೇವರ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್, ತಾಲೂಕು ಎಲೆಕೆರೆ ವಲಯದ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಆಶ್ರಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬ, ಲೋಕ ಕಲ್ಯಾಣಾರ್ಥವಾಗಿ ಸಾಮೂಹಿಕ ಶ್ರೀ ರಾಮ ಅಷ್ಟೋತ್ತರ ಶತನಾಮಾವಳಿ ಪಾರಾಯಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹರವು ದೇಗುಲದ ಪ್ರಾಚೀನ ಸ್ಮಾರಕ ಸುತ್ತಲೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಹೈಟೆಕ್ ಕಾಂಪೌಂಡ್ ನಿರ್ಮಾಣಕ್ಕೆ 1.40 ಕೋಟಿ ರು. ಮಂಜೂರಾಗಿದ್ದು, ಫೆಬ್ರವರಿಗೆ ಕಾಮಗಾರಿ ಆರಂಭವಾಗಲಿದೆ. ಜತೆಗೆ ವೀರಗಲ್ಲು, ಮಾಸ್ತಿಗಲ್ಲು ಪಾರ್ಕ್ ನಿರ್ಮಾಣವಾಗಲಿದೆ. ಇದಾದರೆ ಇಡೀ ರಾಜ್ಯದಲ್ಲೇ ಹರವು ಗ್ರಾಮದ ಪ್ರಾಚೀನ ಸ್ಮಾರಕವು ವೀರಗಲ್ಲು, ಮಾಸ್ತಿಗಲ್ಲು ಪಾರ್ಕ್ ಹೊಂದಿರುವ ಪ್ರಥಮ ಸ್ಮಾರಕವಾಗಲಿದೆ ಎಂದರು.ಧಾರ್ಮಿಕ ಚಿಂತಕ ಕೆ.ಆರ್.ಪೇಟೆ ಗೋಪಾಲಕೃಷ್ಣ ಅವಧಾನಿ ಮಾತನಾಡಿ, ಒಳ್ಳೆಯ ಹಾದಿಯಲ್ಲಿ ನಡೆಯುವ ಮನುಷ್ಯನಿಗೆ ಜೀವನದಲ್ಲಿ ತುಂಬಾ ಕಷ್ಟ- ನೋವುಗಳು ಎದುರಾಗುತ್ತವೆ. ಆದರೆ, ಅವನ ಕೊನೆಯ ದಿನಗಳಲ್ಲಿ ಮೋಕ್ಷ ಲಭಿಸುತ್ತದೆ ಎಂದರು.
ಧರ್ಮಸ್ಥಳ ಯೋಜನೆ ಕೆ.ಆರ್.ನಗರ ಜಿಲ್ಲೆಯ ನಿರ್ದೇಶಕಿ ಮಮತಾರಾವ್ ಮಾತನಾಡಿ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಸಾಮಾನ್ಯ ಮನುಷ್ಯರಂತೆ ನಮಗೆ ಅಂದುಕೊಳ್ಳಲು ಸಾಧ್ಯವಿಲ್ಲ. ಅವರು ಧಾರ್ಮಿಕ ಹಾಗೂ ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸುಮಾರು 4 ದಶಕಗಳಿಂದಲೂ ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ನಡೆಸಿಕೊಂಡು ಬಂದಿರುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಎಚ್.ಆರ್.ಧನ್ಯಕುಮಾರ್, ಬಿ.ಜಿ.ಪ್ರಬಾಕರ್, ಸಿ.ಡಿ.ಮಹಾದೇವ್, ಶಾಂತಲಾ ರಾಮಕೃಷ್ಣೇಗೌಡ, ತಾಲೂಕಿನ ಎಲ್ಲಾ ಮೇಲ್ವಿಚಾರಕರು ಹಾಗೂ ತಾಲೂಕಿನ ಸೇವಾಪ್ರತಿನಿಧಿಗಳು, ಒಕ್ಕೂಟದ ಅಧ್ಯಕ್ಷರು, ಗ್ರಾಮಸ್ಥರು ಉಪಸ್ಥಿತರಿದ್ದರು.