ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಮಧ್ಯ ಕರ್ನಾಟಕದ ಪ್ರಸಿದ್ಧ ದೈವವಾದ ಶಿವನಾರದಮುನಿ ದೇವಾಲಯವನ್ನು ಪುರಾತನ ಶೈಲಿಯಲ್ಲಿ ನಿರ್ಮಾಣ ಮಾಡಲು ತೀರ್ಮಾನಿಸಲಾಯಿತು.ದೇವಾಲಯದ ಸಮುದಾಯ ಭವನದಲ್ಲಿ ಸಭೆ ಸೇರಿದ್ದ ಭಕ್ತರು ಇಂದು ಈ ತೀರ್ಮಾನ ತೆಗೆದುಕೊಂಡರು. ಅದಕ್ಕಾಗಿ ಹಲವು ಪ್ರಸಿದ್ಧ ದೇವಾಲಯಗಳಿಗೆ ಭೇಟಿ ಕೊಟ್ಟು, ದೇವಾಲಯದ ವಿನ್ಯಾಸ, ನಿರ್ಮಾಣ, ವಾಸ್ತು ಮುಂತಾದ ಅಂಶಗಳನ್ನು ಪರಿಶೀಲಿಸಿದರು.
ಸುಮಾರು 30 ವರ್ಷಗಳ ಹಿಂದೆ ನಿರ್ಮಿಸಿರುವ ದೇವಾಲಯದಲ್ಲಿ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ನಾರದಮುನಿ ಸ್ವಾಮಿಗೆ ಮಧ್ಯ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅತಿ ಹೆಚ್ಚಿನ ಭಕ್ತರಿದ್ದಾರೆ. ಅದನ್ನು ಗಮನದಲ್ಲಿಟ್ಟುಕೊಂಡು ದೇವಾಲಯ ನಿರ್ಮಾಣಕ್ಕೆ ಮುಂದಾಗುವುದು ಅಗತ್ಯವಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.ದೈವಕ್ಕೆ ನಡೆದುಕೊಳ್ಳುವ ಭಕ್ತರು ಸಮಾಜದಲ್ಲಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಕೃಷಿಯಲ್ಲಿ ಮುಂದುವರೆದಿದ್ದಾರೆ. ದೇವಾಲಯಕ್ಕೆ ನಿರ್ಮಾಣಕ್ಕೆ ಅಗತ್ಯವಾದ ಕೊಡುಗೆ ನೀಡಲು ಶಕ್ತರಾಗಿದ್ದಾರೆ. ದೇವಾಲಯ ನಿರ್ಮಾಣಕ್ಕೆ ಹತ್ತಾರು ಕೋಟಿ ವೆಚ್ಚ ಆಗಬಹುದೆಂಬುದು ಸಭೆಯಲ್ಲಿನ ಭಕ್ತರ ಅಭಿಪ್ರಾಯವಾಗಿತ್ತು.ನಾರದಮುನಿ ದೈವದ ಮೂಲ ದೇವಾಲಯ ಚಿಗಟೇರಿಯಲ್ಲಿದೆ. ಅದು ಮುಜರಾಯಿ ಇಲಾಖೆಗೆ ಸೇರಿದೆ. ದೇವಾಲಯದ ಖಾತೆಯಲ್ಲಿ ಸುಮಾರು 75 ಲಕ್ಷ ಹಣ ಇದೆ. ಅದನ್ನು ಇಲ್ಲಿ ನಿರ್ಮಿಸಲಾಗುವ ದೇವಾಲಯಕ್ಕೆ ಬಳಸಿಕೊಳ್ಳಲು ಸಂಬಂಧಿಸಿದ ಇಲಾಖೆಗೆ ಮನವಿ ಸಲ್ಲಿಸಲು ತೀರ್ಮಾನಿಸಲಾಯಿತು.
ಸ್ಥಳದಲ್ಲಿಯೇ 25 ಲಕ್ಷ ಸಂಗ್ರಹಹೊಸ ದೇವಾಲಯ ನಿರ್ಮಾಣದ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಸೇರಿದ್ದ ಭಕ್ತರಲ್ಲಿ ಕೆಲವರು ಹಣಕಾಸಿನ ನೆರವು ನೀಡಲು ಮುಂದಾದರು. ಅದರಂತೆ 25 ಲಕ್ಷ ಸ್ಥಳದಲ್ಲೇ ಸಂಗ್ರಹವಾಯಿತು. ಸಿ. ಬಸವಕುಮಾರ್ ದೇವಾಲಯಕ್ಕೆ ಹೊಂದಿಕೊಂಡಿರುವ ನಿವೇಶನವನ್ನು ಬಿಟ್ಟುಕೊಡುವ ತೀರ್ಮಾನ ಪ್ರಕಟಿಸಿದರು.ಟ್ರಸ್ಟ್ ಅಧ್ಯಕ್ಷ ಕೆ.ಎಂ. ಶಿವಮೂರ್ತಪ್ಪ, ಚಿಗಟೇರಿ ದೇವಾಲಯ ಸಮಿತಿಯ ವೇದಮೂರ್ತಿ, ಹುಲ್ಲೇಹಾಳ್ ಶೇಖರಪ್ಪ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ. ಮಂಜುನಾಥ್, ವರ್ತಕ ಕೆ.ಎನ್. ಬಸವಂತಪ್ಪ, ಸೀಗೇಹಳ್ಳಿ ಫಾಲಾಕ್ಷಪ್ಪ, ಜಿ.ಎಸ್. ಉಮೇಶ್, ಹಂಚಿನಮನೆ ಸಂದೀಪ್, ಎಂ.ಜಿ. ದೇವರಾಜ್, ಎಸ್. ಶಶಿಧರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಂ. ತಿಪ್ಪೇಸ್ವಾಮಿ ಮುಂತಾದವರು ಭಾಗವಹಿಸಿದ್ದರು.
ಶಿಕ್ಷಕಿ ಜ್ಯೋತಿಲಕ್ಷ್ಮಿ ಪ್ರಾರ್ಥಿಸಿದರು. ಖಜಾಂಚಿ ಮಾಳಿಗೆಮನೆ ಓಂಕಾರಪ್ಪ ಸ್ವಾಗತಿಸಿದರು. ಶಶಿಧರ ನಿರೂಪಿಸಿದರು. ಸಿ.ಆರ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲೋಹಿತ್ ಕುಮಾರ್ ವಂದಿಸಿದರು.