ಸಾರಾಂಶ
ಮಂಜುನಾಥ ಕೆ.ಎಂ.
ಬಳ್ಳಾರಿ : ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಉಳಿಸುವ ಜತನದ ಮಾತುಗಳು ನವೆಂಬರ್ ತಿಂಗಳಿಗೆ ಸೀಮಿತಗೊಳ್ಳುತ್ತಿರುವ ನಡುವೆ ಆಂಧ್ರಪ್ರದೇಶದ ಆದೋನಿಯ ಕನ್ನಡಾಭಿಮಾನ ಬಳಗವು ಕನ್ನಡ ಕಟ್ಟುವ, ಭಾಷೆ ಸಂಸ್ಕೃತಿಯನ್ನು ವೃದ್ಧಿಗೊಳಿಸಿಕೊಳ್ಳುವ ಕೈಂಕರ್ಯವನ್ನು ವರ್ಷವಿಡೀ ಹಮ್ಮಿಕೊಳ್ಳುವ ಮೂಲಕ ಮಾತೃಭಾಷಾ ಪ್ರೇಮ ಮೆರೆಯುತ್ತಿದೆ.
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆ ಆದೋನಿಯಲ್ಲಿ "ಶ್ರೀಗೂಳ್ಯಂ ಹಿರೇಮಠ ಕುಮಾರಸ್ವಾಮಿ ಕನ್ನಡ ಸೇವಾ ಸಮಿತಿ "ಯಿಂದ ವರ್ಷವಿಡೀ ಶಾಲೆಗೊಂದು ಕನ್ನಡದ ಚಟುವಟಿಕೆಗಳನ್ನು ಹಮ್ಮಿಕೊಂಡು ಆಂಧ್ರಪ್ರದೇಶದಲ್ಲಿ ಓದುತ್ತಿರುವ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ನೆಲ ಜಲ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ಸಮಿತಿಯ ಪದಾಧಿಕಾರಿಗಳು, ಮಾರ್ಗದರ್ಶಕರು ಹಾಗೂ ಆದೋನಿ ತಾಲೂಕಿನ ಕನ್ನಡಪರ ಹೋರಾಟಗಾರರು ಕನ್ನಡದ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಗಮನಾರ್ಹ ಸಂಗತಿಯೆಂದರೆ ಕನ್ನಡ ಪ್ರೀತಿಯನ್ನು ನಿರ್ದಿಷ್ಟ ದಿನ ಅಥವಾ ತಿಂಗಳಿಗೆ ಸೀಮಿತಗೊಳಿಸಿಕೊಳ್ಳದೆ ಕರ್ನೂಲ್ ಜಿಲ್ಲೆಯ 60 ಶಾಲೆಗಳಲ್ಲೂ ವರ್ಷವಿಡೀ ಕನ್ನಡದ ಕಾರ್ಯಕ್ರಮ ಸಂಘಟಿಸಿ, ಕರ್ನಾಟಕ ಆಂಧ್ರ ಗಡಿಯಲ್ಲಿ ಕನ್ನಡದ ಕಾಯಕವನ್ನು ಸೇವಾ ಸಮಿತಿಯ ಸದಸ್ಯರು ಸದ್ದಿಲ್ಲದೆ ತೊಡಗಿಸಿಕೊಂಡಿದ್ದಾರೆ.
ಏನಿದು ಶಾಲೆಗೊಂದು ಕಾರ್ಯಕ್ರಮ:
ಆದೋನಿಯಲ್ಲಿ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಗೂಳ್ಯಂ ಹಿರೇಮಠ ಕುಮಾರಸ್ವಾಮಿ ಸುಮಾರು ಮೂರುವರೆ ದಶಕಗಳ ಹಿಂದೆ ಶಾಲೆಗೊಂದು ಕನ್ನಡ ಕಾರ್ಯಕ್ರಮ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ, ನೆಲ-ಜಲದ ಪ್ರೇಮ ಮೂಡಿಸುವ ಕೆಲಸ ಮಾಡುತ್ತಿದ್ದರು. ಇವರ ಶಿಷ್ಯನಾಗಿ 6ನೇ ತರಗತಿಯಲ್ಲಿ ಓದುತ್ತಿದ್ದ ಹನುವಾಳು ಗಿಡ್ಡಯ್ಯ ಅವರಿಗೆ ಕನ್ನಡ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು. 2002, ಫೆ.5ರಂದು ಹಿರೇಮಠ ಕುಮಾರಸ್ವಾಮಿ ಶಿಕ್ಷಕರು ನಿಧನರಾದ ಬಳಿಕ ಇವರ ಶಿಷ್ಯರಾಗಿದ್ದ ಗಿಡ್ಡಯ್ಯ ಅವರು ಗುರುವಿಗೆ ಕೊಟ್ಟ ಮಾತಿನಂತೆ ಶಾಲೆಗೊಂದು ಕನ್ನಡ ಕಾರ್ಯಕ್ರಮ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಆದೋನಿಯ ಗಡಿನಾಡ ಹಿರಿಯ ಸಾಹಿತಿ ನಾ.ಮ. ಮರುಳಾರಾಧ್ಯರು, ಹೊಳಲಗುಂದಿಯ ರಾಜಾ ಪಂಪನಗೌಡ, ಬದನೆಹಾಳು ದತ್ತಾತ್ರೇಯಗೌಡರು ಮಾರ್ಗದರ್ಶಕರಾಗಿ, ಸಮಿತಿಯ ಪದಾಧಿಕಾರಿಗಳ ಕನ್ನಡ ಕಟ್ಟುವ ಕಾರ್ಯವನ್ನು ಬೆನ್ನುತಟ್ಟುತ್ತಿದ್ದಾರೆ.
ಸೇವಾ ಸಮಿತಿಯ ಅಧ್ಯಕ್ಷ ವೈ.ಮುತ್ತಣ್ಣ, ಉಪಾಧ್ಯಕ್ಷ ಅಶ್ವತ್ಥಪ್ಪ, ಸಹ ಕಾರ್ಯದರ್ಶಿಗಳಾದ ಪಾಂಡುರಂಗ, ನಾಗರಾಜಶೆಟ್ಟಿ, ಸಲಹೆಗಾರರಾದ ಓಂಕಾರ, ಡಿ.ಎಚ್. ವೆಂಕಟೇಶ್, ಐ.ಕೃಷ್ಣಮೂರ್ತಿ, ಎ.ಮೋಹನಯ್ಯ ಸಕ್ರಿಯವಾಗಿ ಕನ್ನಡದ ಕೆಲಸದಲ್ಲಿ ತೊಡಗಿಸಿಕೊಂಡು ಗಡಿನಾಡಿನಲ್ಲಿ ಭಾಷಾ ಪ್ರೀತಿ ಮೆರೆಯುತ್ತಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಿಗೆ ಕನ್ನಡದ ಖ್ಯಾತ ಕವಿಗಳು, ಸಾಹಿತಿಗಳು, ದಾರ್ಶನಿಕರು, ನಾಡಿನ ಸಮಾಜ ಸುಧಾರಕರ ಕುರಿತು ಭಾಷಣ, ಪ್ರಬಂಧ ಸ್ಪರ್ಧೆಗಳು, ವಚನಗಳ ಕಂಠಪಾಠ, ಚಿತ್ರಕಲಾ ಸ್ಪರ್ಧೆ, ಕನ್ನಡ ಕವಿಗಳ ಸ್ಮರಣೆ ಸೇರಿದಂತೆ ಅನೇಕ ಚಟುವಟಿಕೆಗಳನ್ನು ಸಂಘಟಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸುವ ಸೇವಾ ಸಮಿತಿಯ ಪದಾಧಿಕಾರಿಗಳು, ಕನ್ನಡದ ಪರಂಪರೆ, ಭಾಷೆಯ ಮಹತ್ವ, ಗಡಿನಾಡಿನಲ್ಲಿ ಕನ್ನಡ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಿರುವ ಹಿನ್ನೆಲೆ ಕುರಿತು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತಾರೆ.
ಅಷ್ಟೇ ಅಲ್ಲ, ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕರ್ನಾಟಕದಲ್ಲಿ ಕನ್ನಡದ ಯಾವುದೇ ಮಹತ್ವದ ಕಾರ್ಯಕ್ರಮ ನಡೆದರೂ ಹಾಜರಾಗುತ್ತಾರೆ. ಆದೋನಿ ಸೇರಿದಂತೆ ಆಂಧ್ರಗಡಿ ಪ್ರದೇಶದಲ್ಲಿ ಜರುಗುವ ಗಡಿನಾಡು ಉತ್ಸವ, ಗಡಿನಾಡ ಕನ್ನಡಿಗರ ಸಮಾವೇಶ, ಕರ್ನಾಟಕ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೆ ಸಹಕರಿಸುತ್ತಾರೆ. ನನ್ನಗುರು ಶ್ರೀಗೂಳ್ಯಂ ಹಿರೇಮಠ ಕುಮಾರಸ್ವಾಮಿ ನಾನು ವಿದ್ಯಾರ್ಥಿಯಾಗಿರುವಾಗ ಶಾಲೆಗೊಂದು ಕನ್ನಡ ಕಾರ್ಯಕ್ರಮ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದರು. ಅವರ ಆರೋಗ್ಯ ಕ್ಷೀಣಿಸಿದಾಗ ಕನ್ನಡ ಕೆಲಸ ಮುಂದುವರಿಸಿಕೊಂಡು ಹೋಗಬೇಕು ಎಂದು ನನ್ನಿಂದ ಭಾಷೆ ತೆಗೆದುಕೊಂಡಿದ್ದರು. ಗುರುಗಳ ಆಶಯದಂತೆ ಆದೋನಿ ತಾಲೂಕಿನ ಎಲ್ಲ ಕನ್ನಡ ಮನಸ್ಸುಗಳ ಸಹಕಾರದಿಂದ ಕನ್ನಡದ ಕೆಲಸ ಮಾಡುತ್ತಿದ್ದೇವೆ ಎನ್ನುತ್ತಾರೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿಯ ಶ್ರೀಗೂಳ್ಯಂ ಹಿರೇಮಠ ಕುಮಾರಸ್ವಾಮಿ ಕನ್ನಡ ಸೇವಾ ಸಮಿತಿಯ ಕಾರ್ಯದರ್ಶಿ ಹನುವಾಳು ಗಿಡ್ಡಯ್ಯ.