ಸಿನಿಮೋತ್ಸವವಾದ ಆನೆಗೊಂದಿ ಉತ್ಸವ

| Published : Mar 14 2024, 02:08 AM IST

ಸಾರಾಂಶ

ಆನೆಗೊಂದಿ ಉತ್ಸವದಲ್ಲಿ ನಾಡು, ನುಡಿ, ಸಂಸ್ಕೃತಿ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ಇತಿಹಾಸದ ಕುರಿತು ಚರ್ಚೆಯಾಗುವ ಬದಲು ಅದೊಂದು ರೀತಿಯಲ್ಲಿ ಸಿನಿಮಾ ಉತ್ಸವದಂತಿತ್ತು.

- ವೇದಿಕೆಯುದ್ದಕ್ಕೂ ಸಿನೆಮಾ ತಾರೆಯರ ಅಬ್ಬರ

- ನಾಡು, ನುಡಿ, ಸಂಸ್ಕೃತಿ ಮರೆತ ಜಿಲ್ಲಾಡಳಿತ

- ಉತ್ಸವದ ವೇದಿಕೆಯಲ್ಲಿಯೇ ಸಿನೆಮಾ ಟ್ರೀಸರ್ ಬಿಡುಗಡೆಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದೆರಡು ದಿನಗಳಿಂದ ನಡೆದ ಆನೆಗೊಂದಿ ಉತ್ಸವದಲ್ಲಿ ನಾಡು, ನುಡಿ, ಸಂಸ್ಕೃತಿ ಹಾಗೂ ಜಿಲ್ಲೆಯ ಐತಿಹಾಸಿಕ ಸ್ಮಾರಕಗಳು, ಇತಿಹಾಸದ ಕುರಿತು ಚರ್ಚೆಯಾಗುವ ಬದಲು ಅದೊಂದು ರೀತಿಯಲ್ಲಿ ಸಿನಿಮಾ ಉತ್ಸವದಂತಿತ್ತು.

ಎರಡು ದಿನಗಳ ಕಾಲವೂ ಉತ್ಸವದಲ್ಲಿ ಜನರು ಅಷ್ಟಾಗಿ ಉತ್ಸಾಹದಿಂದ ಭಾಗಿಯಾಗಲಿಲ್ಲ. ಮೆರವಣಿಗೆ ಮತ್ತು ಕ್ರೀಡಾಕೂಟ, ವಿಚಾರ ಸಂಕಿರಣದಲ್ಲಿ ಜನರು ಭಾಗವಹಿಸುವಿಕೆ ಅಷ್ಟಕಷ್ಟೇ ಇತ್ತು. ಆದರೆ, ರಾತ್ರಿಯ ವೇಳೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನಿರೀಕ್ಷೆ ಮೀರಿ ಜನರು ಭಾಗವಹಿಸಿದ್ದರು. ಹೀಗೆ ಬಂದಿದ್ದ ಜನರು ಸಿನಿಮಾ ಉತ್ಸವ ಕಂಡು ಹಿಡಿಶಾಪ ಹಾಕುತ್ತಿರುವುದು ಕಂಡು ಬಂತು.

ಖಾಲಿ ಕುರ್ಚಿ:

ಸ್ಥಳೀಯ ಕಲಾವಿದರಿಗೆ ಮಧ್ಯಾಹ್ನದಿಂದಲೇ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗಿತ್ತು. ವೇದಿಕೆಯ ಮುಂಭಾಗದಲ್ಲಿ ನಾಲ್ಕಾರು ಜನರು ಸಹ ಇಲ್ಲದೆ ಖಾಲಿ ಇದ್ದ ಸಾವಿರಾರು ಕುರ್ಚಿಗಳಿಗೆ ಸ್ಥಳೀಯ ಕಲಾವಿದರು ತಮ್ಮ ಪ್ರದರ್ಶನ ನೀಡಿದ್ದು ಮಾತ್ರ ದುರಂತವೇ ಸರಿ.

ಕಾರ್ಯಕ್ರಮದಲ್ಲಿ ಉತ್ಸವದ ಉದ್ದೇಶವನ್ನೇ ಮರೆತಂತೆ ಕಾಣುತ್ತಿತ್ತು. ಎರಡು ದಿನಗಳ ಕಾಲವೂ ಉತ್ಸವದ ಪ್ರಮುಖ ವೇದಿಕೆಯಲ್ಲಿ ನಾಡು, ನುಡಿಯ ಕುರಿತು ಒಂದು ಸಣ್ಣ ಚಿಂತನೆಗೂ ಜಾಗ ಇರಲಿಲ್ಲಿ. ವಿಷಯ ತಜ್ಞರಿಗೂ ಅವಕಾಶ ಇರಲಿಲ್ಲ. ಅಲ್ಲಿದ್ದದ್ದು ಕೇವಲ ಸಿನಿಮಾ ತಾರೆಯರ ಆರ್ಭಟ ಎನ್ನುವಂತೆ ಆಗಿತ್ತು.

ಆನೆಗೊಂದಿ ಉತ್ಸವದ ಮೊದಲ ದಿನ ಹಂಸಲೇಖ, ಧ್ರುವ ಸರ್ಜಾ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿದರೆ ಎರಡನೇ ದಿನ ಶ್ರೀ ಮುರಳಿ, ಅರ್ಜುನ ಜನ್ಯ, ಅನುಶ್ರೀ, ಮಂಗ್ಲಿ ಸೇರಿದಂತೆ ಸಾಲು ಸಾಲು ನಟರೇ ತುಂಬಿಕೊಂಡಿದ್ದರು.

ಅಷ್ಟೇ ಅಲ್ಲ, ಅವರಿಂದಲೂ ಕಲಾ ಪ್ರದರ್ಶನದ ಬದಲಾಗಿ ಸಿನಿಮಾ ಟೀಸರ್ ಬಿಡುಗಡೆ, ಸಿನಿಮಾ ಪ್ರಚಾರವನ್ನೇ ಮಾಡಲಾಯಿತು. ಶ್ರೀಮುರಳಿ ನಟಿಸಿರುವ ಭಗೀರ ಸಿನೆಮಾ ಕುರಿತು ಅರ್ಧಗಂಟೆ ಕಾಲ ಪ್ರಚಾರ ಮಾಡಲಾಯಿತು. ಟೀಸರ್ ಸಹ ತೋರಿಸಲಾಯಿತು. ಅಷ್ಟೇ ಯಾಕೆ ಗಂಗಾವತಿ ಶಾಸಕ ಗಾಲಿನ ಜನಾರ್ದನ ಪುತ್ರ ನಟಿಸುತ್ತಿರುವ ಜೂನಿಯರ್ ಚಿತ್ರದ ಟೀಸರ್ ಎರಡೆರಡು ಬಾರಿ ಪ್ರದರ್ಶಿಸಲಾಯಿತು.

ಉತ್ಸವದ ನಿಮಿತ್ತ ನಡೆದ ಎರಡು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಿನಿಮಾ ಉತ್ಸವವೇ ಆಯಿತೇ ಹೊರತು ಗಂಭೀರ ಚಿಂತನೆ ನಡೆಯಲಿಲ್ಲ. ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿಲ್ಲ ಎನ್ನುವುದು ಪ್ರಜ್ಞಾವಂತರ ಆರೋಪ.

ಕನಕಗಿರಿ ಉತ್ಸವದಲ್ಲೂ ಸಿನೆಮಾ ಹಾವಳಿ:

ಕೇವಲ ಆನೆಗೊಂದಿ ಉತ್ಸವ ಅಷ್ಟೇ ಅಲ್ಲ, ಕನಕಗಿರಿ ಉತ್ಸವವು ಅದೇ ಮಾದರಿಯಲ್ಲಿ ನಡೆಯಿತು. ಕನಕಗಿರಿ ಉತ್ಸವವನ್ನು ಮೀರಿಸುವಂತೆ ಆನೆಗೊಂದಿ ಉತ್ಸವದಲ್ಲಿ ಸಿನಿಮಾ ಉತ್ಸವ ನಡೆಯಿತು ಎನ್ನುವ ವಿಷಯವೂ ಈಗ ಗಂಭೀರ ಚರ್ಚೆಯಾಗುತ್ತಿದೆ. ಇಂಥ ಉತ್ಸವ ಬೇಕಿತ್ತಾ ಎಂದು ಜನರೇ ಕೊರಗುತ್ತಿದ್ದಾರೆ.

ಸರ್ಕಾರದ ನಿರ್ಲಕ್ಷ್ಯ:

ಕನಕಗಿರಿ ಉತ್ಸವಕ್ಕೆ ಸಿಕ್ಕ ಪ್ರಾತಿನಿಧ್ಯ ಆನೆಗೊಂದಿ ಉತ್ಸವಕ್ಕೆ ದೊರೆಯಲಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೇವಲ ಕನಕಗಿರಿ ಉತ್ಸವಕ್ಕೆ ಬಂದರೇ ಹೊರತು ಆನೆಗೊಂದಿ ಉತ್ಸವಕ್ಕೆ ಬರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಸ್ಥಳೀಯವಾಗಿಯೇ ಇದ್ದರೂ ಆನೆಗೊಂದಿ ಉತ್ಸವಕ್ಕೆ ರಾತ್ರಿಯ ವೇಳೆಗೆ ಉದ್ಘಾಟನಾ ಸಮಾರಂಭಕ್ಕೆ ಮಾತ್ರ ಆಗಮಿಸಿದರೆ ಹೊರತು ಸಮಾರೋಪ ಸಮಾರಂಭಕ್ಕೂ ಬರಲಿಲ್ಲ, ಮೆರವಣಿಗೆ ಕಾರ್ಯಕ್ರಮಕ್ಕೂ ಬರಲಿಲ್ಲ. ಇದರಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ.

ಲೆಕ್ಕ ನೀಡುವುದೇ ಜಿಲ್ಲಾಡಳಿತ:

ಕನಕಗಿರಿ ಮತ್ತು ಆನೆಗೊಂದಿ ಉತ್ಸವವನ್ನು ಯಶಸ್ವಿಯಾಗಿ ಆಚರಣೆ ಮಾಡಲಾಗಿದೆ ಎಂದು ಬೀಗುತ್ತಿರುವ ಜಿಲ್ಲಾಡಳಿತ ಉತ್ಸವಕ್ಕಾಗಿ ಮಾಡಿದ ಲೆಕ್ಕಾಚಾರವನ್ನು ಸಾರ್ವಜನಿಕರ ಮುಂದೆ ಇಡುವುದೇ ಎನ್ನುವುದು ಸದ್ಯದ ಕುತೂಹಲವಾಗಿ. ಅದರಲ್ಲೂ ಸಿನೆಮಾ ತಾರೆಯರಿಗೆ ಕೊಟ್ಟ ಸಂಭಾವನೆ ಎಷ್ಟು ಎನ್ನುವುದು ಜನರ ಪ್ರಶ್ನೆಯಾಗಿದೆ.