ಭೂಸ್ವಾಧೀನ ವಿರೋಧಿ ರೈತರಿಂದ ಆನೇಕಲ್‌ ಚಲೋ

| Published : Aug 20 2025, 01:30 AM IST

ಸಾರಾಂಶ

ಆನೇಕಲ್ ತಾಲೂಕು ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಪದಾಧಿಕಾರಿಗಳಾದ ಜಯಪ್ರಕಾಶ್, ಕೇಬಲ್ ದೇವರಾಜ್, ಚಂದ್ರರೆಡ್ಡಿ ಅನೇಕ ಪ್ರಮುಖರು ತಾಲೂಕು ಕಚೇರಿ ಮುತ್ತಿಗೆಯಲ್ಲಿ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಆನೇಕಲ್ ಆನೇಕಲ್ ತಾಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ಮುತ್ತಾನಲ್ಲೂರು ಕ್ಯಾಂಪ್ ನಲ್ಲಿ ಸತತ 42 ದಿನಗಳಿಂದ ಹಮ್ಮಿಕೊಂಡಿದ್ದ ಧರಣಿ ಬಗ್ಗೆ ರಾಜ್ಯ ಸರ್ಕಾರ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಮಂಗಳವಾರ ಆನೇಕಲ್ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ದೊಮ್ಮಸಂದ್ರ, ಮುತ್ತಾನಲ್ಲೂರು ಭಾಗದ ರೈತರು ಚಂದಾಪುರ ಮಾರ್ಗವಾಗಿ ಆನೇಕಲ್ ಪ್ರವೇಶಿಸಿದರೆ ಸರ್ಜಾಪುರ ಅತ್ತಿಬೆಲೆ ಭಾಗದ ರೈತರು ಕೋರ್ಟ್ ರಸ್ತೆಯ ಮೂಲಕ ಸಹಸ್ರ ಸಂಖ್ಯೆಯಲ್ಲಿ ಬಂದು ದೇವರ ಕೊಂಡಪ್ಪ ವೃತ್ತದಲ್ಲಿ ಜಮಾಯಿಸಿದರು. ರೈತ ಮಹಿಳೆಯರೂ ಅಪಾರ ಸಂಖ್ಯೆಯಲ್ಲಿ ಬಂದಾಗ ಆನೇಕಲ್ ವಕೀಲರ ಸಂಘದ ಪದಾಧಿಕಾರಿಗಳು ಜೊತೆಗೂಡಿದರು. ದೇವರಕೊಂಡಪ್ಪ ವೃತ್ತದಲ್ಲಿ ಧರಣಿ ಕುಳಿತಾಗ ಅಕ್ಷರಶ: ಆನೇಕಲ್ ಜಂಕ್ಷನ್ ಬ್ಲಾಕ್ ಆಗಿ ವಾಹನ ಸಂಚಾರ ಸ್ತಬ್ದವಾಯಿತು. ಕಿಲೋಮೀಟರ್ ಗಟ್ಟಲೆ ನಿಂತ ವಾಹನಗಳು ಗಂಟೆಗಟ್ಟಲೆ ಚಲಿಸಲಾಗಲಿಲ್ಲ.ಅಲ್ಲಿಂದ ಮುಂದೆ ಸಾಗಿದ ಹೋರಾಟಗಾರರು ಗಾಂಧಿ ವೃತ್ತದ ಬಳಿ ಬಂದಾಗ ಪ್ರಮುಖರಾದ ಜಯಪ್ರಕಾಶ್, ದೇವರಾಜ್, ರಾಮಚಂದ್ರ ರೆಡ್ಡಿ, ಮನುಜ ರವರು ಗಾಂಧಿ ಪುತಳಿಗೆ ಪುಷ್ಪಮಾಲೆ ಸಮರ್ಪಿಸಿ ತಾಲೂಕು ಕಚೇರಿಗೆ ತಲುಪಿದರು. ತಾಲೂಕು ಕಚೇರಿ ಧರಣಿ ಪ್ರತಿಭಟನೆ ಜೊತೆಗೆ ಮುತ್ತಿಗೆ ಹಾಕಿದಂತಿತ್ತು. ಬೆಳಗ್ಗೆ ಪ್ರಾರಂಭವಾದ ಧರಣಿ ಸಂಜೆ 5 ಗಂಟೆಗೆ ತಹಸೀಲ್ದಾರ್ ಶಶಿಧರ ಮಾಡ್ಯಾಳ್ ಬಂದು ರೈತರ ನೋವನ್ನು ಆಲಿಸಿ ಉನ್ನತ ಅಧಿಕಾರಿಗಳ ಸಂದೇಶವನ್ನು ಓದಿದಾಗ ಮುಷ್ಕರವನ್ನು ತಾತ್ಕಾಲಿಕವಾಗಿ ಹಿಂಪಡೆದು ರೈತರ ಪರ ನಿಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸರ್ಕಾರವನ್ನು ಎಚ್ಚರಿಸಿದರು.

ತಾಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಜಯಪ್ರಕಾಶ್, ವಿಶ್ವನಾಥ ರೆಡ್ಡಿ, ರೈತ ಮುಖಂಡ ಕೇಶವ, ವಕೀಲರ ಸಂಘದ ಅಧ್ಯಕ್ಷ ವೈ. ಪ್ರಕಾಶ್ ಮಾತನಾಡಿದರು. ಪ್ರತಿಭಟನೆಯಲ್ಲಿ ಚಂದ್ರರೆಡಿ, ರಾಮಸ್ವಾಮಿ ರೆಡ್ಡಿ, ಜಯಪ್ರಕಾಶ್, ಸಿಪಿಎಂ ಮಂಜುನಾಥ್, ಮಾಹದೇಶ್, ರಾವಣ ಪಟಾಪಟ್ ಪ್ರಕಾಶ್, ಕನ್ನಡ ಪರ ಹೋರಾಟಗಾರ ಲೋಕೇಶ್‌ಗೌಡ, ಹುಲ್ಲಹಳ್ಳಿ ಶ್ರೀನಿವಾಸ್, ಕೆ.ಪಿ.ರಾಜು, ದೇವರಾಜು, ಈಶ್ವರ ರೆಡ್ಡಿ, ಎಸ್ ಆರ್ ಟಿ ಅಶೋಕ್, ರಾಮಪ್ಪ, ಪ್ರಭಾ ಬೆಳವಂಗಲ ಮುಂತಾದ ರೈತ ಪರ ದನಿ ಎತ್ತುವ ಮೂಲಕ ಸರ್ಕಾರದತ್ತ ಚಾಟಿ ಬೀಸಿದರು.