ಸಾರಾಂಶ
ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ಉಚಿತವಾಗಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಶಾಲೆಗಳಲ್ಲಿ ದಾಖಲಾದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಮಾತ್ರೆ ನೀಡಿ ಅವರ ಆರೋಗ್ಯ ಕಾಪಾಡಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಜಂತುಹುಳು ಹೊಂದಿರುವ ಮಕ್ಕಳು ಕಡ್ಡಾಯವಾಗಿ ಮಾತ್ರೆ ತಗೆದುಕೊಳ್ಳಬೇಕು. ಜಂತುಹುಳುಗಳಿಂದ ಮಕ್ಕಳಲ್ಲಿ ರಕ್ತಹೀನತೆ, ಅಪೌಷ್ಠಿಕತೆ ಉಂಟಾಗುತ್ತದೆ. ಇದರಿಂದ ಮಾನಸಿಕ, ದೈಹಿಕ ಬೆಳವಣಿಗೆ ಕುಂಠಿತವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಮುಕುಂದ ಕಾಂಬಳೆ ಹೇಳಿದರು.ತಾಲೂಕಿನ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಚಿಕ್ಕಲಕಿ ಕ್ರಾಸ್ ಸಮುದಾಯ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಜಂತುಹುಳು ಬಾಧೆ ನಿವಾರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶುದ್ಧ ನೀರು, ಆಹಾರ ತಗೆದು ಕೊಳ್ಳಬೇಕು. ಸುತ್ತಲಿನ ಪರಿಸರ ಶುಚಿಯಾಗಿರಿಸಿಕೊಳ್ಳಬೇಕು. ಉಸಿರುಗಟ್ಟುವುದನ್ನು ತಡೆಗಟ್ಟಲು ಶುದ್ಧ ಕುಡಿವ ನೀರು ಉಪಯೋಗಿಸಬೇಕು. ಶರೀರದಲ್ಲಿ ಆರೋಗ್ಯ ಸಂಪನ್ನತೆ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.ಚಿಕ್ಕಪಡಸಲಗಿ ಸಮುದಾಯ ಆರೋಗ್ಯಾಧಿಕಾರಿ ಆನಂದ ತೆಲಸಂಗ ಮಾತನಾಡಿ, ಮಕ್ಕಳಿಗೆ ಜಂತುಹುಳು ನಾಶಕ ಮಾತ್ರೆ ಉಚಿತವಾಗಿ ಎಲ್ಲಾ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. ಶಾಲೆಗಳಲ್ಲಿ ದಾಖಲಾದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಮಾತ್ರೆ ನೀಡಿ ಅವರ ಆರೋಗ್ಯ ಕಾಪಾಡಲಾಗುತ್ತಿದೆ. ಅಲ್ಬೆಂಡಾಜೋಲ್ ಮಾತ್ರೆ ಮಕ್ಕಳಿಗೆ ಹಾಗೂ ವಯಸ್ಕರಿಗೆ ಒಂದು ಸುರಕ್ಷಿತ ಔಷಧವಾಗಿದೆ. ಇದನ್ನು ಅಗಿದು ನುಂಗಬೇಕು ಎಂದರು.
ವಿಶ್ರಾಂತ ಹಿರಿಯ ಶಿಕ್ಷಕ ಬಸವರಾಜ ಅನಂತಪೂರ ಮಾತನಾಡಿದರು. ವೇದಿಕೆಯಲ್ಲಿ ಪ್ರಭಾರ ಮುಖ್ಯಶಿಕ್ಷಕ ಬಸವರಾಜ ಜಾಲೋಜಿ, ಶಿಕ್ಷಕರಾದ ಈರಪ್ಪ ದೇಸಾಯಿ, ಲೋಹಿತ ಮಿರ್ಜಿ, ಗುಲಾಬಚಂದ ಜಾಧವ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿಯರಾದ ಪ್ರಮೀಳಾ ತೆಲಸಂಗ, ಸಹನಾ ಕಲ್ಯಾಣಿ ಸೇರಿದಂತೆ ಆಶಾ ಕಾರ್ಯಕರ್ತೆಯರಾದ ಸಾವಿತ್ರಿ ನ್ಯಾಮಗೌಡ, ಮಹಾದೇವಿ ಸನಧಿ, ಶೋಭಾ ಪಾಟೀಲ, ಮಹಾದೇವಿ ಅಂಬಿ ಸಹಿತ ಹಲವರು ಇದ್ದರು.