ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ

| Published : Jul 10 2025, 12:45 AM IST

ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

೨೬ ಸಾವಿರ ಕನಿಷ್ಠ ವೇತನ, ೧೦ ಸಾವಿರ ಮಾಸಿಕ ಪಿಂಚಣಿ ಕೊಡಬೇಕು. ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ತೊಂದರೆ ಕೊಡಬಾರದು. ಎಫ್ ಆರ್‌ಎಸ್‌ನ್ನು ಕಡ್ಡಾಯ ಮಾಡಬಾರದು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ದೇಶಾದ್ಯಂತ ಕಾರ್ಮಿಕ ಒಕ್ಕೂಟಗಳ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನಡೆದ ಭಾರತ ಬಂದ್ ಹಿನ್ನೆಲೆಯಲ್ಲಿ ನಗರದಲ್ಲೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ, ಸಾಮೂಹಿಕ ಬಂಧನಕ್ಕೊಳಗಾಗುವ ಮುಖಾಂತರ ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಂಡರು.

ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದ ಆವರಣದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ, ಅಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿ ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಅವರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಅಂಗನವಾಡಿ ನೌಕರರು, ಆಶಾ ಕಾರ್ಯಕರ್ತೆಯರನ್ನು ಕಾರ್ಮಿಕರೆಂದು ಪರಿಗಣಿಸಿ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂದು ಒತ್ತಾಯಿಸಿದರು.

ದೇಶದ ಕಾರ್ಪೊರೇಟ್ ಬಂಡವಾಳದಾರರಿಗೆ ೧೫.೩೨ ಲಕ್ಷ ಕೋಟಿ ಸಾಲ ಮನ್ನಾ, ೧.೯೭ ಲಕ್ಷ ಕೋಟಿ ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯವನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗಳಿಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ ಎಂದು ಸಬೂಬು ಹೇಳುತ್ತಿದೆ ಎಂದರು.

ದೇಶದ ೨೯ ಕಾರ್ಮಿಕ ಕಾನೂನುಗಳನ್ನು ೪ ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಸಂಘ ಕಟ್ಟುವ ಹಕ್ಕು ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿರ್ಬಂಧ ತರುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ, ಇದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ೨೦೨೩ ಏಪ್ರಿಲ್ ೧ ರಿಂದ ೧೯೭೨ರ ಗ್ರಾಜ್ಯುಟಿ ಪಾವತಿ ಕಾಯ್ದೆಯನ್ನು ಅನ್ವಯ ಮಾಡಿ ಈಗಾಗಲೇ ೨೮೭ ಕಾರ್ಯಕರ್ತೆಯರಿಗೆ ಮತ್ತು ೧೨೦೪ ಸಹಾಯಕಿಯರಿಗೆ ಪಾವತಿಸುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಈ ಕಾಯ್ದೆಯನ್ನು ೨೦೧೧ ರಿಂದ ನಿವೃತ್ತಿಯಾದ ೧೦,೩೧೧ ಕಾರ್ಯಕರ್ತೆಯರು, ೧೧,೯೮೦ ಸಹಾಯಕಿಯರಿಗೂ ಅನ್ವಯಿಸಬೇಕೆಂದೂ ಒತ್ತಾಯಿಸಿದರು.

೨೬ ಸಾವಿರ ಕನಿಷ್ಠ ವೇತನ, ೧೦ ಸಾವಿರ ಮಾಸಿಕ ಪಿಂಚಣಿ ಕೊಡಬೇಕು. ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ತೊಂದರೆ ಕೊಡಬಾರದು. ಎಫ್ ಆರ್‌ಎಸ್‌ನ್ನು ಕಡ್ಡಾಯ ಮಾಡಬಾರದು, ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಕಲ್ಯಾಣ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಉಮಾದೇವಿ, ಉಗ್ರನರಸಿಂಹಗೌಡ, ಅಂಗನವಾಡಿ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷೆ ಕೆ. ಸುಜಾತ, ಪ್ರಧಾನ ಕಾರ್ಯದರ್ಶಿ ಎ. ನಾಗಮಣಿ, ಖಜಾಂಚಿ ಭಾಗ್ಯ, ಗುರುಲಿಂಗಮ್ಮ, ಶಾಹಿದಾಬಾನು, ಚಿಕ್ಕತಾಯಮ್ಮ, ಮಂಜುಳ, ರಾಣಿ, ಶಹಜಾನ್, ವಿಶಾಲಾಕ್ಷಿ, ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ಕವಿತಾ, ಚೆನ್ನಾಜಮ್ಮ, ವಿ., ಭಾಗ್ಯ, ಸಿ., ಅಶ್ವಿನಿ, ಶಶಿಕಲಾ, ಜಯಲಕ್ಷ್ಮೀ ಇತರರು ಭಾಗವಹಿಸಿದ್ದರು.