ಸಾರಾಂಶ
ಮೂಗು ಕತ್ತರಿಸಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಅಂಗನವಾಡಿ ಸಹಾಯಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮೂಗು ಕತ್ತರಿಸಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದ ಅಂಗನವಾಡಿ ಸಹಾಯಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿರುವ ಅಂಗನವಾಡಿ ಸಹಾಯಕಿ ಸುಗಂಧಾ ಮೋರೆ (50) ಅವರ ಮೂಗಿನ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಸಿಡಿಪಿಒ ಸುಮಿತ್ರಾ ತಿಳಿಸಿದ್ದಾರೆ.
ಆರೋಪಿ ಕಲ್ಯಾಣಿ ಮೋರೆ ಮತ್ತು ಅಂಗನವಾಡಿ ಕಾರ್ಯಕರ್ತೆ ಮೀರಾ ಮೋರೆ ನಡುವೆ ಕಲಹಗಳಿದ್ದವು. ಇದೇ ವೇಳೆ ಮಕ್ಕಳು ಕಲ್ಯಾಣಿ ಮೋರೆ ಮನೆ ಆವರಣದ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾರೆ. ಇದರಿಂದ ಕೆರಳಿದ ಆರೋಪಿ ಕಲ್ಯಾಣಿ ಮೋರೆ ಅಂಗನವಾಡಿ ಕಾರ್ಯಕರ್ತೆ ಮೀರಾ ಮೋರೆ ಮೇಲೆ ಹಲ್ಲೆಗೆ ಮುಂದಾದ ಈ ವೇಳೆ ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ ಸಹಾಯಕಿ ಸುಗಂಧಾ ಅವರ ಮೂಗಿಗೆ ಹರಿತ ಆಯುಧದಿಂದ ಹೊಡೆದ್ದಿದ್ದಾನೆ. ಇದರಿಂದಾಗಿ ಸುಗಂಧಾ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದರು ಎಂದರು.ಮಂಗಳವಾರ ಮೂಗಿನ ಯಶಸ್ವಿ ಶಸ್ತ್ರಚಿಕಿತ್ಸೆಯಾಗಿದ್ದು, ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಈ ಪ್ರಕರಣದ ಕುರಿತು ಕಾಕತಿ ಠಾಣೆಗೆ ದೂರು ನೀಡಿದ್ದೇವೆ. ಅಂಗನವಾಡಿ ಸಹಾಯಕಿಯ ಮೂಗು ಕತ್ತರಿಸಿರುವುದು ಅಮಾನವೀಯ ಘಟನೆ ಆಗಿದೆ. ಈ ವಿಚಾರವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಗಮನಕ್ಕೆ ತರಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.