ಸಾರಾಂಶ
ಮುಧೋಳ : ಅಂಗನವಾಡಿಗೆ ಹೋಗಿದ್ದ ಬಾಲಕಿಯ ಕೆನ್ನೆಗೆ ಅಂಗನವಾಡಿ ಸಹಾಯಕಿ ಅನ್ನದ ಚಮಚೆಯಿಂದ ಬರೆ ಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ವಾರ್ಡ್ ಸಂಖ್ಯೆ 2ರ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ನಡೆದಿದೆ.
ಪ್ರೀತಿ ಪ್ರದೀಪ ಬಾಗಲಿ ಎಂಬ ಬಾಲಕಿಯ ಕೆನ್ನೆಯನ್ನು ಗಾಯಗೊಳಿಸಿ ಅಮಾನವೀಯ ತೋರಲಾಗಿದೆ. ಈ ಸಂಬಂಧ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶೋಭಾ ನಾ. ಹೊಳೆಪ್ಪನವರ, ಸಹಾಯಕಿ ಶಾರವ್ವ ಪಂಚಗಾವಿ ಅವರನ್ನು ತಾತ್ಕಾಲಿಕವಾಗಿ ತಕ್ಷಣದಿಂದಲೇ ಅಮಾನತುಗೊಳಿಸಿ, ಬೇರೆಯವರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದೇನೆಂದು ಸಿಡಿಪಿಒ ಕಾಶಿಬಾಯಿ ಕೋರೆಗೋಳ ತಿಳಿಸಿದ್ದಾರೆ.
ಅಂಗನವಾಡಿಯಲ್ಲಿ ಬಾಲಕಿ ಕೆನ್ನೆಗೆ ಸಹಾಯಕಿ ಬರೆ ಹಾಕಿದ್ದಾಳೆ ಎಂದು ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆಯಲ್ಲಿ ದೂರು ಬಂದ ತಕ್ಷಣವೇ ತಾವು ಮತ್ತು ವಲಯದ ಮೇಲ್ವಿಚಾರಕಿ ಸೇರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಅಲ್ಲದೆ, ಘಟನೆ ವಿವರಣೆ ಪಡೆದುಕೊಂಡು ಬಾಲಕಿಗೆ ಬರೆ ಹಚ್ಚಿರುವುದನ್ನು ಖಚಿತಪಡಿಸಿಕೊಂಡು ಬಾಲಕಿಯನ್ನು ಲೋಕಾಪೂರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಇದಲ್ಲದೆ ಈ ಘಟನೆಗೆ ಕಾರಣೀಕರ್ತರಾದ ಇಬ್ಬರನ್ನು ಅಮಾನುತುಗೊಳಿಸಿದ್ದೇನೆ ಎಂದು ಸಿಡಿಪಿಒ ಹೇಳಿದ್ದಾರೆ.
ಇಂತಹ ಘಟನೆಯನ್ನು ತಾವು ಎಂದಿಗೂ ಸಹಿಸುವುದಿಲ್ಲ. ಮುಂದೆಯೂ ಇಂತಹ ಘಟನೆ ನಡೆಯಬಾರದು. ಯಾರೇ ತಪ್ಪು ಮಾಡಲಿ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಆರ್.ಬಿ.ತಿಮ್ಮಾಪೂರ, ಜಿಲ್ಲಾ ಉಸ್ತುವಾರಿ ಸಚಿವ