ಸಾರಾಂಶ
ಕುಂದಚೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಕೋಪಟ್ಟಿ ದೇವಸ್ಥಾನ, ಕೋಪಟ್ಟಿ ಶಾಲೆ, ಚೆರಂಡೇಟಿ, ಚಿಟ್ಟಿಮಾನಿ ಪದಕಲ್ಲು, ಕೋಡಿ ಮೊಟ್ಟೆ, ತಾಪ್ರಿಕಾಡು, ಪೂವಲೆ ಮಾನಿ, ಸಿಂಗತ್ತೂರು ಸೇರಿ ಒಟ್ಟು 9 ಅಂಗನವಾಡಿ ಕೇಂದ್ರಗಳಿಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕುಂದಚೇರಿ ಗ್ರಾಮ ಪಂಚಾಯಿತಿಗೆ ಒಳಪಡುವ ಕೋಪಟ್ಟಿ ದೇವಸ್ಥಾನ, ಕೋಪಟ್ಟಿ ಶಾಲೆ, ಚೆರಂಡೇಟಿ, ಚಿಟ್ಟಿಮಾನಿ ಪದಕಲ್ಲು, ಕೋಡಿ ಮೊಟ್ಟೆ, ತಾಪ್ರಿಕಾಡು, ಪೂವಲೆ ಮಾನಿ, ಸಿಂಗತ್ತೂರು ಸೇರಿ ಒಟ್ಟು 9 ಅಂಗನವಾಡಿ ಕೇಂದ್ರಗಳಿಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.ಅಂಗನವಾಡಿ ಮೇಲ್ವಿಚಾರಕಿ ಮಾರ್ಗದರ್ಶನದಂತೆ ಅಂಗನವಾಡಿ ಕಾರ್ಯಕರ್ತೆಯರಾದ ಸುಶಿ, ಯೋಗ್ಯತಾ, ಈಶ್ವರಿ ಅವರು ಗ್ರಾಮ ಪಂಚಾಯತಿ ಪ್ರಮುಖರಿಗೆ ಕುರ್ಚಿಗಳಿಗೆ ಬೇಡಿಕೆ ಸಲ್ಲಿಸಿದ್ದರು. ಅವರ ಕೋರಿಕೆಯಂತೆ ಶುಕ್ರವಾರ ಚೆಟ್ಟಿಮಾನಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕುರ್ಚಿಗಳನ್ನು ಹಸ್ತಾಂತರಿಸಲಾಯಿತು.
ಅಂಗನವಾಡಿ ಕೇಂದ್ರವನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಭರವಸೆ ನೀಡಿದರು.ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯಿತಿವತಿಯಿಂದ ಎಲ್ಲ ಸೌಲಭ್ಯ ನೀಡಲಾಗುವುದು ಎಂದು ಸದಸ್ಯ ಹ್ಯಾರಿಸ್ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ, ಗ್ರಾಮ ಪಂಚಾಯಿತಿಗೆ ಒಳಪಡುವ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಮಾದರಿ ಅಂಗನವಾಡಿ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಉದ್ಯಾನವನ ಮತ್ತು ಜಾರುಬಂಡಿ, ಜೋಕಾಲಿ, ಒಳಗೊಂಡಂತೆ ಒಳಾಂಗಣ ಮತ್ತು ಹೊರಾಂಗಣ ಆಟಿಕೆಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ಕೊಡಿಸುವಂತೆ ಕೋರಿಕೊಂಡರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಾದವ್ ಮಾತನಾಡಿ, ಹಂತ ಹಂತವಾಗಿ ಅಂಗನವಾಡಿಗಳಿಗೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಚೆಟ್ಟಿಮಾನಿ ಅಂಗನವಾಡಿ ಕಾರ್ಯಕರ್ತೆ ಸುಶಿ ವಂದಿಸಿದರು.