ಸಾರಾಂಶ
ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿವೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ಅಯ್ಯಪ್ಪನಗರ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ಇಂದಿನ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯ ಕ್ಷೀಣಿಸುತ್ತಿದೆ. ಇದರಿಂದ ಮಕ್ಕಳಲ್ಲಿ ಸಮಾಜವನ್ನು ಗೌರವಿಸುವ ಗುಣ ಕಡಿಮೆಯಾಗುತ್ತಿದೆ. ಅದ್ದರಿಂದ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಸಂಸ್ಕಾರ ಕಲಿಸುವ ಮೂಲಕ ಸಮಾಜ ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸುವ ಕೇಂದ್ರಗಳಾಗಿ ಮಾಡಬೇಕು ಎಂದು ಹೇಳಿದರು. ರಾಜ್ಯ ಸರ್ಕಾರ ಸಂಪೂರ್ಣ ಐದು ಗ್ಯಾರಂಟಿಗಳನ್ನು ಘೋಷಿಸಿ ಬರಿದಾಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಅಂತಹ ವರಿಗೆ ಹಂತ ಹಂತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕೈಗೊಂಡು ತಕ್ಕ ಉತ್ತರ ನೀಡಲಾಗುತ್ತಿದೆ. ಗುಣಮಟ್ಟದ ರಸ್ತೆ, ಅಂಗನವಾಡಿ ಕೇಂದ್ರ, ಸಮುದಾಯ ಭವನ ಸೇರಿದಂತೆ ಸಾರ್ವಜನಿಕ ಸೇವೆಗೆ ರಾಜ್ಯ ಸರ್ಕಾರ ಸದಾ ಸಿದ್ಧವಾಗಿ ನಿಂತಿದೆ ಎಂದು ತಿಳಿಸಿದರು. ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಪ್ರಸ್ತುತ ವಾರ್ಡಿಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಹಲವಾರು ಮೂಲಭೂತ ಸೌಕರ್ಯಗಳಿಗೆ ನಗರಸಭೆ ಅನುದಾನ ಬಿಡುಗಡೆಗೊಳಿಸಿ ಸಹಕಾರ ನೀಡಲಾಗುತ್ತಿದೆ. ಸ್ಥಳೀಯ ನಿವಾಸಿಗಳು ಹಾಗೂ ಜನಪ್ರತಿನಿಧಿಗಳ ಬಾಂಧವ್ಯ ಉತ್ತಮವಾಗಿದೆ ಎಂದರು. ಸುತ್ತಮುತ್ತಲಿನ ನಿವಾಸಿಗಳ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಕ್ಕೆ ಭೂಮಿ ಪೂಜೆಗೆ ಇಂದು ಚಾಲನೆ ನೀಡಲಾಗಿದ್ದು ಮುಂದಿನ ಆಗಸ್ಟ್ ತಿಂಗಳೊಳಗೆ ಕಾಮಗಾರಿ ಪೂರೈಸುವ ಗುರಿ ಹೊಂದಲಾಗಿದೆ ಎಂದರು. ನಗರಸಭಾ ಸದಸ್ಯ ಶಾದಬ್ ಅಲಂ ಮಾತನಾಡಿ ಈ ಹಿಂದೆ ಅಂಗನವಾಡಿ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಸಂಬಂಧ ಹಲವಾರು ಬಾರಿ ಬೇಡಿಕೆ ಸಲ್ಲಿಸಿ ನೂತನ ಕೇಂದ್ರಕ್ಕೆ ಒತ್ತಾಯಿಸಲಾಗಿದ್ದು ಎಚ್.ಡಿ. ತಮ್ಮಯ್ಯ ಶಾಸಕರಾದ ಬಳಿಕ ಕಾಮಗಾರಿಗೆ ಚಾಲನೆ ನೀಡಿರುವುದು ಖುಷಿಯ ಸಂಗತಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ನಗರಸಭಾ ಪೌರಾಯುಕ್ತ ಬಿ.ಸಿ. ಬಸವರಾಜ್, ನಗರಸಭಾ ಸದಸ್ಯ ಮುನೀರ್ ಅಹ್ಮದ್, ಕಾಂಗ್ರೆಸ್ ಮುಖಂಡ ಮನ್ಸೂರ್, ಜಿಪಂ ಮಾಜಿ ಅಧ್ಯಕ್ಷ ಕೆ. ಮಹಮ್ಮದ್, ಪಿರ್‌ದೋಸ್ ಮಸೀದಿ ಅಧ್ಯಕ್ಷ ರಹೀಸ್ ಹಾಜರಿದ್ದರು.24 ಕೆಸಿಕೆಎಂ 3ಚಿಕ್ಕಮಗಳೂರಿನ ಅಯ್ಯಪ್ಪನಗರದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ಶಾಸಕ ಎಚ್.ಡಿ. ತಮ್ಮಯ್ಯ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು. ಗಾಯತ್ರಿ ಶಾಂತೇಗೌಡ, ವರಸಿದ್ದಿ ವೇಣುಗೋಪಾಲ್, ಬಿ.ಸಿ. ಬಸವರಾಜ್ ಇದ್ದರು.