ಅಂಗನವಾಡಿ ಕೇಂದ್ರಗಳು ದುರಸ್ತಿ, ಮೂಲ ಸೌಕರ್ಯದ ಕೊರತೆ ಇದ್ದರೆ ಪರಿಹರಿಸಲಾಗುವುದು: ಜಿ.ಟಿ.ದೇವೇಗೌಡ

| Published : Jun 22 2024, 12:47 AM IST

ಅಂಗನವಾಡಿ ಕೇಂದ್ರಗಳು ದುರಸ್ತಿ, ಮೂಲ ಸೌಕರ್ಯದ ಕೊರತೆ ಇದ್ದರೆ ಪರಿಹರಿಸಲಾಗುವುದು: ಜಿ.ಟಿ.ದೇವೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿರುವುದರಿಂದ ಸಾಕಷ್ಟು ಮಾಹಿತಿಯನ್ನು ಅಪ್ ಡೇಟ್ ಮಾಡಲಾಗುತ್ತಿದೆ. ಇಲಾಖೆಯ ಕೆಲಸಗಳು ಸುಗಮವಾಗಿ ಮಾಡಲು ಮತ್ತು ಮಕ್ಕಳಿಗೆ ಬೇಕಾದ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ಮತ್ತಷ್ಟು ಮಾಹಿತಿ ಅಳವಡಿಸಿಕೊಂಡು ಚೆನ್ನಾಗಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಅಂಗನವಾಡಿ ಕೇಂದ್ರಗಳು ದುರಸ್ತಿ ಪಡಿಸುವುದು ಸೇರಿದಂತೆ ಯಾವುದೇ ಮೂಲ ಸೌಕರ್ಯದ ಕೊರತೆ ಇದ್ದರೆ ತಕ್ಷಣವೇ ಗಮನಹರಿಸಿ ಪರಿಹರಿಸಲಾಗುವುದು ಎಂದು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಭರವಸೆ ನೀಡಿದರು.

ಮೈಸೂರಿನ ವಿಜಯನಗರದ ವಿಭಾಗೀಯ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್ ಸಂಗ್ ಮೊಬೈಲ್ ವಿತರಿಸಿ ಮಾತನಾಡಿದರು.

ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿರುವುದರಿಂದ ಸಾಕಷ್ಟು ಮಾಹಿತಿಯನ್ನು ಅಪ್ ಡೇಟ್ ಮಾಡಲಾಗುತ್ತಿದೆ. ಇಲಾಖೆಯ ಕೆಲಸಗಳು ಸುಗಮವಾಗಿ ಮಾಡಲು ಮತ್ತು ಮಕ್ಕಳಿಗೆ ಬೇಕಾದ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ಮತ್ತಷ್ಟು ಮಾಹಿತಿ ಅಳವಡಿಸಿಕೊಂಡು ಚೆನ್ನಾಗಿ ಕೆಲಸ ಮಾಡಬೇಕು ಎಂದರು.

ಅಂಗನವಾಡಿಗಳು ದುರಸ್ತಿಗೆ ಬಂದಿದ್ದರೆ ಹೇಳಬೇಕು. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇದ್ದರೆ ನೇರವಾಗಿ ಹೇಳಬಹುದು. ಇಲ್ಲವೇ ಆಯಾಯ ಗ್ರಾಪಂಗಳಿಗೆ ಮಾಹಿತಿ ಕೊಟ್ಟರೆ ಸರಿಯಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಲು ಬೇಕಾದ ಅನುದಾನ ನೀಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.

ಮಕ್ಕಳಿಗೆ ಕಾರ್ಯಕರ್ತೆಯರು, ಸಹಾಯಕಿಯರು ದೇವರಿದ್ದಂತೆ. ಅದೇ ರೀತಿ ಮಕ್ಕಳನ್ನು ಕಂಡು ಕೆಲಸ ಮಾಡಬೇಕು. ಪ್ರೀತಿ, ವಿಶ್ವಾಸದಿಂದ ಮಕ್ಕಳನ್ನು ಕರೆತಂದು ಅವರನ್ನು ನೋಡಿಕೊಂಡು ವಾಪಸ್ ಕಳುಹಿಸುವುದು ಸುಲಭವಲ್ಲ. ವೇತನಕ್ಕಾಗಿ ಕೆಲಸ ಮಾಡುತ್ತೇವೆ ಅಂತ ಹೇಳಬಹುದು. ಆದರೆ, ಇದೊಂದು ಮಾನವೀಯ ಸೇವೆಯಾಗಿದೆ ಎಂದು ಅವರು ತಿಳಿಸಿದರು.

ಮೊದಲೆಲ್ಲಾ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಬೇಕು ಎನ್ನುತ್ತಿದ್ದರು. ಆದರೆ, ಇಂದು ಒಂದು ಮಗುವನ್ನು ಸಾಕಲು ಸಾಧ್ಯವಾಗದಂತಾಗಿದೆ. ಒಂದು ಮಗುವನ್ನು ನೋಡಿಕೊಳ್ಳಲು ಆಗೋದಿಲ್ಲ ಅಂತಾರೆ. ಅಂತಹದರಲ್ಲಿ ಹತ್ತಾರು ಮಕ್ಕಳನ್ನು ನೋಡಿಕೊಂಡು ಆರೈಕೆ ಮಾಡುವುದು ಸುಲಭವಲ್ಲ. ಅದಕ್ಕಾಗಿಯೇ ಕಾರ್ಯಕರ್ತೆಯರೇ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು.

ಮಹಿಳೆಯರು ಅಬಲೆಯರಲ್ಲ ಸಬಲೆಯರು ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಸಣ್ಣ ಕೆಲಸದಿಂದ ವಿಮಾನ ಹಾರಾಡಿಸುವ ಫೈಲಟ್ ಗಳಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರ ಶೋಷಣೆ, ದೌರ್ಜನ್ಯ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಅಧಿಕಾರಿಗಳು ಕೂಡ ಗ್ರಾಪಂಗೆ ಹೋಗಿ ಸಮಸ್ಯೆಗಳನ್ನು ಆಲಿಸುವಂತೆ ಹೇಳಿದ್ದೇನೆ. ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ದುರಸ್ತಿ ಇದ್ದರೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇನೆ. ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ತಿಳಿಸಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ. ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಬ್ಬಯ್ಯ, ತಾಪಂ ಇಒ ಗಿರಿಧರ್ ಇದ್ದರು.