ಸಾರಾಂಶ
ಮಕ್ಕಳಿಂದ ಹಿಡಿದು ಹಿರಿಯವರೆಗಿನ ಎಲ್ಲ ವಯೋಮಾನದವರ ಕಾಳಜಿ, ರಕ್ಷಣೆ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದ್ಯ ಕರ್ತವ್ಯ. ಆದರೆ, ಜಿಲ್ಲೆಯಲ್ಲಿ ಈ ಕಾಳಜಿ ಸರ್ಕಾರಗಳು ಮರೆತಿವೆಯೇ ಎಂಬ ಶಂಕೆ ವ್ಯಕ್ತವಾಗುವಂಥ ಸುದ್ದಿಯೊಂದಿದೆ. ಶಿಕಾರಿಪುರ ತಾಲೂಕಿನಲ್ಲಿ ಕಳೆದ 6 ತಿಂಗಳಿಂದ ಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿದ್ದ ಹಾಲಿನ ಪೌಡರ್‌ಗೆ ಸರ್ಕಾರ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಕಳೆದ 6 ತಿಂಗಳಿಂದ ತಾಲೂಕಿನಾದ್ಯಂತ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಳಿಸಿದೆ. ಗ್ಯಾರಂಟಿ ನೆಪದಲ್ಲಿ ಸರ್ಕಾರ ಮಕ್ಕಳಿಗೆ ದ್ರೋಹ ಬಗೆಯುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಹುಲಗಿ ಆರೋಪಿಸಿದ್ದಾರೆ.
- ಶಿಕಾರಿಪುರ ತಾಲೂಕಿನ 313 ಅಂಗನವಾಡಿಗಳಲ್ಲಿ 15 ಸಾವಿರ ಮಕ್ಕಳು, ಫಲಾನುಭವಿ ಗರ್ಭಿಣಿಯರು
- ಕೇಂದ್ರ, ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಅಂಗನವಾಡಿ ಕೇಂದ್ರಗಳು- ಸೊರಬ ಕ್ಷೇತ್ರ, ಭದ್ರಾವತಿ ಕ್ಷೇತ್ರ ನಾಲ್ಕೈದು ತಿಂಗಳಿಂದ ಹಾಲಿನ ಪೌಡರ್ ಪೂರೈಕೆ ಆಗಿಲ್ಲ
- ಆಡಳಿತ ಪಕ್ಷ ಕಾಂಗ್ರೆಸ್, ವಿಪಕ್ಷದ ಬಿಜೆಪಿ ಶಾಸಕರು, ಸಂಸದರು ತುರ್ತು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಲಿ - - - ಕನ್ನಡಪ್ರಭ ವಾರ್ತೆ, ಶಿಕಾರಿಪುರಅಂಗನವಾಡಿ ಮಕ್ಕಳಿಗೆ ನೀಡಲಾಗುತ್ತಿದ್ದ ಹಾಲಿನ ಪೌಡರ್‌ಗೆ ಸರ್ಕಾರ ಹಣ ಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಕೆಎಂಎಫ್ ಕಳೆದ 6 ತಿಂಗಳಿಂದ ತಾಲೂಕಿನಾದ್ಯಂತ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಳಿಸಿದೆ. ಗ್ಯಾರಂಟಿ ನೆಪದಲ್ಲಿ ಸರ್ಕಾರ ಮಕ್ಕಳಿಗೆ ದ್ರೋಹ ಬಗೆಯುತ್ತಿದೆ ಎಂದು ಜಯಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ಹುಲಗಿ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ಮಕ್ಕಳು ಅಪೌಷ್ಠಿಕತೆಯಿಂದ ಬಳಲದಂತೆ ಹಾಲು ನೀಡುವ ಬದಲು ಹಾಲಿನ ಪೌಡರ್ ಅನ್ನು ಸುದೀರ್ಘ ಕಾಲದಿಂದ ವಿತರಿಸಲಾಗುತ್ತಿದೆ. ಇದೀಗ ಹಾಲಿನ ಪೌಡರ್ ವಿತರಣೆ ಸ್ಥಗಿತಗೊಂಡಿದ್ದು, ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿ ಮುಗ್ದ ಮಕ್ಕಳಿಗೆ ದ್ರೋಹ ಬಗೆಯುತ್ತಿದೆ ಎಂದು ಆರೋಪಿಸಿದರು.313 ಕೇಂದ್ರಗಳು, 15 ಸಾವಿರ ಫಲಾನುಭವಿಗಳು:
ಅಂಗನವಾಡಿ ಕೇಂದ್ರದಲ್ಲಿ ಬಹುತೇಕ ಆರ್ಥಿಕ ದುರ್ಬಲ ಕುಟುಂಬದ ಮಕ್ಕಳ ಹೆಚ್ಚಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಡಿ ಈ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಶಿಕಾರಿಪುರ ತಾಲೂಕಿನಾದ್ಯಂತ 313 ಅಂಗನವಾಡಿ ಕೇಂದ್ರದಲ್ಲಿ ಅಂದಾಜು 15 ಸಾವಿರ ಮಕ್ಕಳು ಹಾಗೂ ಫಲಾನುಭವಿ ಗರ್ಭಿಣಿಯರಿದ್ದಾರೆ. ಇವರಿಗೆಲ್ಲ ಈಗ 6 ತಿಂಗಳಿನಿಂದ ಹಾಲಿನ ಪೌಡರ್ ಸಿಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಸಂಪರ್ಕಿಸಿದಾಗ ಅಂಗನವಾಡಿ ಕೇಂದ್ರಗಳಿಗೆ ಕೆಎಂಎಫ್ ಮೂಲಕ ಹಾಲಿನ ಪೌಡರ್ ಸರಬರಾಜಾಗುತ್ತಿದ್ದು, ತಾಲೂಕಿಗೆ ₹76 ಲಕ್ಷ ಬಾಕಿ ಹಣ ಪಾವತಿಸದ ಹಿನ್ನೆಲೆ ಕೆಎಂಎಫ್ ಹಾಲಿನ ಪೌಡರ್ ಪೂರೈಕೆ ಸ್ಥಗಿತಗೊಳಿಸಿದೆ ಎಂದು ತಿಳಿಸಿದ್ದಾರೆ. ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಒಟ್ಟು ₹1.5 ಕೋಟಿ ಬಾಕಿ ಹಣ ಪಾವತಿಸದ ಹಿನ್ನೆಲೆ ಕೆಎಂಎಫ್ ಪೂರೈಕೆ ಸ್ಥಗಿತಗೊಳಿದೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ವಿವರಿಸಿದರು.ಆಡಳಿತ, ವಿಪಕ್ಷಗಳಿಗೆ ನಾಚಿಕೆಗೇಡು:
ಶಿಕಾರಿಪುರ ರಾಜ್ಯ ರಾಜಕೀಯ ಭೂಪಟದಲ್ಲಿ ಹೆಚ್ಚು ಪ್ರಸಿದ್ಧ ಕ್ಷೇತ್ರವಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ರಾಘವೇಂದ್ರ ಹಾಗೂ ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಸ್ವಕ್ಷೇತ್ರವಾಗಿದೆ. ಇಂತಹ ಕ್ಷೇತ್ರದಲ್ಲಿ ಸರ್ಕಾರ ಹಣ ಪಾವತಿಸದೆ ಮುಗ್ದ ಮಕ್ಕಳಿಗೆ ವಿತರಿಸಬೇಕಾದ ಹಾಲಿನ ಪೌಡರ್ ಸೌಲಭ್ಯ ಸ್ಥಗಿತಗೊಂಡಿದೆ. ಈ ವಿಚಾರ ಕೇವಲ ಆಡಳಿತ ಪಕ್ಷವಲ್ಲದೇ, ವಿರೋಧ ಪಕ್ಷದ ಮುಖಂಡರಿಗೂ ನಾಚಿಕೆಗೇಡು. ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಸೊರಬ ಕ್ಷೇತ್ರದಲ್ಲಿ ಹಾಗೂ ಆಡಳಿತರೂಢ ಕಾಂಗ್ರೆಸ್ ಶಾಸಕರ ಭದ್ರಾವತಿ ಕ್ಷೇತ್ರದಲ್ಲಿ ಕಳೆದ 4-5 ತಿಂಗಳಿಂದ ಹಾಲಿನ ಪೌಡರ್ ಸ್ಥಗಿತಗೊಂಡಿದೆ. ಜನಪ್ರತಿನಿಧಿಗಳ ಈ ನಿರ್ಲಕ್ಷ್ಯೆಯ ಕಾರ್ಯವೈಖರಿ ಬಗ್ಗೆ ಜನತೆ ಅನುಮಾನ ಪಡುವಂತಾಗಿದೆ ಎಂದು ಕಿಡಿಕಾರಿದರು.ಈ ಕೂಡಲೇ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ವಿಪಕ್ಷ ಬಿಜೆಪಿ ಶಾಸಕರು ಹಾಗೂ ಸಂಸದರು ಈ ಬಗ್ಗೆ ತುರ್ತು ಗಮನಹರಿಸಬೇಕು. ಕೂಡಲೇ ಹಾಲಿನ ಪೌಡರ್ ವಿತರಣೆ ಮೂಲಕ ಅಂಗನವಾಡಿ ಮಕ್ಕಳನ್ನು ಅಪೌಷ್ಟಿಕತೆಯಿಂದ ಪಾರುಮಾಡುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಶಿವಯ್ಯ ಶಾಸ್ತ್ರಿ, ನಗರಾಧ್ಯಕ್ಷ ಮುಕ್ರಂ, ಮುಖಂಡ ಸಣ್ಣಪ್ಪ ಹುಲ್ಮಾರ್, ಯಮುನಪ್ಪ ಮತ್ತಿತರರು ಉಪಸ್ಥಿತರಿದ್ದರು.- - - -19ಕೆಎಸ್.ಕೆಪಿ1:
ಪತ್ರಿಕಾಗೋಷ್ಠಿಯಲ್ಲಿ ಕೃಷ್ಣ ಹುಲಗಿ ಮಾತನಾಡಿದರು. ಶಿವಯ್ಯ ಶಾಸ್ತ್ರಿ, ಮುಕ್ರಂ, ಸಣ್ಣಪ್ಪ ಮತ್ತಿತರರು ಇದ್ದರು.