ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಳೆದ 3 ತಿಂಗಳಿನಿಂದ ರಾಜ್ಯಾದ್ಯಂತ ವೇತನವಾಗದ್ದರಿಂದ ಜೀವನ ನಿರ್ವಹಣೆ, ಮಕ್ಕಳ ಓದು, ಮನೆ ಬಾಡಿಗೆ ಕಟ್ಟವುದು ಕಷ್ಟವಾಗಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಅಂಗನವಾಡಿ ಸಹಾಯಕಿಯೊಬ್ಬರು ಸಾಲ ತೀರಿಸಲು ಹಣ ಇಲ್ಲದ್ದರಿಂದ ಆಸಿಡ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆಗೆ ಬಂದಿದೆ.ಕೆಟಿಜೆ ನಗರದ ಡಾಂಗೇ ಪಾರ್ಕ್ ಆವರಣದ ಅಂಗನವಾಡಿ ಕೇಂದ್ರ ಸಹಾಯಕಿ ಭಾರತಿ ಆಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ ದುರ್ದೈವಿ. ಆಟೋ ರಿಕ್ಷಾ ಚಾಲನೆ ಮಾಡುವ ಪತಿ, ಅಂಗನವಾಡಿ ನೌಕರಿ ಮಾಡಿ ಬರುವ ವೇತನದಲ್ಲಿ ಪುಟ್ಟ ಕುಟುಂಬ ಕಟ್ಟಿಕೊಂಡು ಜೀವನ ನಡೆಸುತ್ತಿದ್ದ ಭಾರತಿ ಕಳೆದ 3 ತಿಂಗಳಿನಿಂದ ಅಂಗನವಾಡಿ ವೇತನ ಬಾರದೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕುಟುಂಬ ನಿರ್ವಹಣೆಗೆ ಅನೇಕ ಕಡೆ ಸಾಲ ಮಾಡಿ, ಅಷ್ಟು ಹಣ ತೀರಿಸುವುದಕ್ಕಾಗದೇ ಭಾರತಿ ಪರಿತಪಿಸುತ್ತಿದ್ದರು. ಆಟೋ ಚಾಲಕನ ವೃತ್ತಿ ಮಾಡುವ ಪತಿಯ ದುಡಿಮೆಯೂ ಅಷ್ಟಕ್ಕಷ್ಟೇ ಇದೆ. ಜತೆಗೆ ಎರಡು ಹೆಣ್ಣು ಮಕ್ಕಳನ್ನು ಓದಿಸಿಕೊಂಡು, ಮನೆ ಬಾಡಿಗೆ ಕಟ್ಟಿಕೊಂಡು, ಜೀವನ ನಡೆಸುವುದೇ ದುಸ್ತರವಾಗಿದ್ದರಿಂದ ಭಾರತಿ ಆತ್ಮಹತ್ಯೆಗೆ ಆಲೋಚನೆ ಮಾಡಿದ್ದಾರೆ. ಸಾಲ ಕೊಟ್ಟವರು ಹಣ ವಾಪಾಸ್ಸು ಮಾಡುವಂತೆ ಒತ್ತಡ ಹೇರಿದ್ದರಿಂದ ಸಾಯಲು ಆಕೆ ನಿರ್ಧರಿಸಿದ್ದರು ಎನ್ನಲಾಗಿದೆ. ಅಂಗನವಾಡಿ ನೌಕರಿ ಮಾಡುತ್ತಿದ್ದರೂ 3 ತಿಂಗಳ ವೇತನ ಬಾರದ್ದರಿಂದ ದಿಕ್ಕೇ ತೋಚದಂತಾದ ಅಂಗನವಾಡಿ ಸಹಾಯಕಿ ಆಸಿಡ್ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪತಿ, ಮಕ್ಕಳು, ನೆರೆಹೊರೆಯವರು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ವೈದ್ಯರು ತಕ್ಷಣ ಬಾಪೂಜಿ ಆಸ್ಪತ್ರೆ ಅಥವಾ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವಂತೆ ಶಿಫಾರಸ್ಸು ಮಾಡಿದ್ದಾರೆ. ವಿಷಯ ತಿಳಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಎಐಟಿಯುಸಿ ರಾಜ್ಯ ಸಂಚಾಲಕ ಕಾಮ್ರೆಡ್ ಆವರಗೆರೆ ವಾಸು ಮತ್ತು ಇತರರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ, ಅಸ್ವಸ್ಥ ಅಂಗನವಾಡಿ ಸಹಾಯಕಿ ಭಾರತಿ ಹಾಗೂ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. ತೀವ್ರ ಆರ್ಥಿಕ ಸಂಕಷ್ಟದಿಂದ ನೊಂದು, ಅಂಗನವಾಡಿ ಸಹಾಯಕಿ ಭಾರತಿ ಆಸಿಡ್ ಸೇವಿಸಿ, ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಕ್ಷೇತ್ರದ ಸಂಸದರು, ಸಚಿವರು, ಶಾಸಕರು, ಪಾಲಿಕೆ ಮೇಯರ್, ಸದಸ್ಯರು ಅಸ್ವಸ್ಥ ಭಾರತಿ ಅವರ ಚಿಕಿತ್ಸೆಗೆ ನೆರವಿನ ಹಸ್ತ ಚಾಚಬೇಕು. ತಕ್ಷಣವೇ ಅಂಗನವಾಡಿ ನೌಕರರ ವೇತನ ಬಿಡುಗಡೆ ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))