ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತಾಗಬೇಕು

| Published : Jul 21 2024, 01:17 AM IST

ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತಾಗಬೇಕು
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಗಳು ನೀಡುವ ಎಲ್ಲ ಕೆಲಸ ಕಾರ್ಯಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸಮರ್ಪಕವಾಗಿ ಮಾಡಬೇಕು. ಇದರೊಟ್ಟಿಗೆ ಅಂಗನವಾಡಿಗೆ ಬರುವ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಸರ್ಕಾರಗಳು ನೀಡುವ ಎಲ್ಲ ಕೆಲಸ ಕಾರ್ಯಗಳನ್ನು ಅಂಗನವಾಡಿ ಕಾರ್ಯಕರ್ತೆಯರು ಸಮರ್ಪಕವಾಗಿ ಮಾಡಬೇಕು. ಇದರೊಟ್ಟಿಗೆ ಅಂಗನವಾಡಿಗೆ ಬರುವ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಶಾಸಕ ಜೆ.ಟಿ.ಪಾಟೀಲ ತಿಳಿಸಿದರು. ಇಲ್ಲಿನ ತಾಪಂ ಆವರಣದಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸರ್ಕಾರದಿಂದ ಅಂಗನವಾಡಿ ಮೇಲ್ವಿಚಾರಕರು ಮತ್ತು ಕಾರ್ಯಕರ್ತೆಯರಿಗೆ ಹೊಸದಾಗಿ ನೀಡಿರುವ ಮೊಬೈಲ್‌ ವಿತರಣೆ ಮಾಡಿ ಅವರು ಮಾತನಾಡಿ, ಸರ್ಕಾರದಿಂದ ಯಾವುದೇ ಕೆಲಸ ಬಂದರೂ ಗ್ರಾಮಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಸಹಾಯ ಪಡೆದು ಎಲ್ಲ ಮಾಹಿತಿ ಸಂಗ್ರಹಿಸುವ ಕೆಲಸವಾಗುತ್ತಿದೆ. ಇಂತಹ ಒತ್ತಡದ ಕೆಲಸದ ಮಧ್ಯೆಯೂ ಅಂಗನವಾಡಿ ಕೆಲಸಗಳನ್ನು ಮಾಡುತ್ತಿರುವುದು ಉತ್ತಮ ಕೆಲಸ. ಸರ್ಕಾರ ಇವರ ಕಾರ್ಯಗಳನ್ನು ಗಮನಿಸಿ ಸರ್ಕಾರಿ ನೌಕರರು ಎಂದು ಗಮನಿಸಿ ಅವರಿಗೂ ಉತ್ತಮ ಸಂಬಳ ಸಿಗುವಂತೆ ಮಾಡಬೇಕು ಎನ್ನುವುದಕ್ಕೆ ನಮ್ಮದು ಬೆಂಬಲವಿದೆ. ಕೂಡಲೇ ನಿಮ್ಮ ಮನವಿಯನ್ನು ಸಂಬಂಧಿಸಿದ ಇಲಾಖೆ ಸಚಿವರ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ. ಅಲ್ಲದೇ ಅಂಗನವಾಡಿಗಳಲ್ಲಿ ಮಕ್ಕಳಿಗೆ ನೀಡುವ ಆಹಾರದಲ್ಲಿ ಗುಣಮಟ್ಟದ ಆಹಾರ ಸಿಗುವಂತೆ ಮಾಡಬೇಕು ಎಂದು ಸಚಿವರ ಗಮನಕ್ಕೆ ತರಲಾಗಿದೆ ಎಂದರು.

ಕಾರ್ಯಕರ್ತೆಯರು ತಮ್ಮ ತಮ್ಮ ಅಂಗನವಾಡಿಗಳ ವ್ಯಾಪ್ತಿಯಲ್ಲಿ ರಾಜಕೀಯ ಪಕ್ಷಗಳ ಹಿಂಬಾಲಕರಂತೆ ಕೆಲಸ ಮಾಡುವ ಪ್ರಕರಣಗಳು ಗಮನಕ್ಕೆ ಇದ್ದು ಇಂತಹ ಪ್ರಕರಣಗಳು ಮುಂದೆ ಆಗದಂತೆ ನಿಗಾವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬರುವ ದಿನಗಳಲ್ಲಿ ಅಂತಹ ಪ್ರಕರಣಗಳಲ್ಲಿ ಯಾರಾದರೂ ಕಂಡು ಬಂದರೆ ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬೀಳಗಿ ಮತಕ್ಷೇತ್ರದ ಬಾದಾಮಿ, ಬಾಗಲಕೋಟೆ ಮತ್ತು ಬೀಳಗಿ ತಾಲೂಕಿನ ಅಂಗನವಾಡಿ ಮೇಲ್ವಿಚಾರಕರು ಮತ್ತು ಕಾರ್ಯೆಕರ್ತೆಯರು ಸೇರಿ ಒಟ್ಟು ೪೧೭ ನೂತನ ಮೊಬೈಲ್‌ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ತಾಪಂ ಇಒ ಅಭಯ ಮೊರಬ, ಬೀಳಗಿ ಸಿಡಿಪಿಒ ಬಸವರಾಜ ಕವಟೇಕರ, ಬಾಗಲಕೋಟೆ ಸಿಡಿಪಿಒ ರಮೇಶ ಸೂಳಿಕೇರಿ, ಬಾದಾಮಿ ಸಿಡಿಪಿಒ ಶಿಲ್ಪಾ ಹಿರೇಮಠ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ್, ಪಪಂ ಸದಸ್ಯರಾದ ಪಡಿಯಪ್ಪ ಕರಿಗಾರ, ಅಜ್ಜು ಭಾಯಿಸರ್ಕಾರ, ಹಿರಿಯರಾದ ಅಣವೀರಯ್ಯ ಪ್ಯಾಟಿಮಠ, ಶಿವಾನಂದ ಮಾದರ (ಬೀಳಗಿ)ಸಿದ್ದು ಸಾರಾವರಿ ಸೇರಿದಂತೆ ಇತರರು ಇದ್ದರು.