ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಮಕ್ಕಳಲ್ಲಿ ಮಾನವೀಯ ಬಾಂಧವ್ಯ ವೃದ್ಧಿಸಲು ಅಂಗನವಾಡಿ ಕೇಂದ್ರಗಳು ಪೂರಕವಾಗಲಿವೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಶುಕ್ರವಾರ 2023-24ನೇ ಸಾಲಿನ ಜಿಪಂ ವಿಜಯಪುರ ಶಿಶು ಅಭಿವೃದ್ಧಿ ಯೋಜನೆಯಡಿ ತಲಾ ₹15 ಲಕ್ಷ ವೆಚ್ಚದಲ್ಲಿ ನಂ- 2 ಹಾಗೂ 4 ನೂತನ ಅಂಗನವಾಡಿ ಕಟ್ಟಡಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ಈ ಕಾಲಘಟ್ಟದಲ್ಲಿ ಮಕ್ಕಳು ಮಾನವೀಯ ಬಾಂಧವ್ಯ ಕಡಿಮೆಗೊಳಿಸುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕವಾಗುವ ದಿನಗಳು ದೂರವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಎಚ್ಚೆತ್ತುಕೊಂಡು ಗುಣಾತ್ಮಕ ಸಂಸ್ಕಾರ ಕಲಿಸುವ ಕೇಂದ್ರಗಳಾಗಿ ಸಮಾಜ ಗಟ್ಟಿಗೊಳಿಸುವ ಮಕ್ಕಳನ್ನು ರೂಪಿಸುವ ಕೇಂದ್ರಗಳಾಗಲಿ ಎಂದು ಶುಭ ಹಾರೈಸಿದರು.ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮದಲ್ಲಿನ ಮೂಲಭೂತ ಸೌಕರ್ಯಗಳನ್ನು ಒದಗಿಸುವುದ ನನ್ನ ಕರ್ತವ್ಯ. ಪ್ರತೀ ಗ್ರಾಮದ ಅಭಿವೃದ್ಧಿಗೆ ನನ್ನದೇ ಆದ ಕನಸಿನ ಯೋಜನೆಗಳ ಮೂಲಕ ಅಭಿವೃದ್ಧಿಪಡಿಸಲಾಗುವುದು. ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ತಮ್ಮ ಗ್ರಾಮಗಳಿಗೆ ತಲುಪಿಸುವ ಕರ್ತವ್ಯ ಕ್ಷೇತ್ರದ ಶಾಸಕರ ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಬೇಡಿಕೆ ಮನವಿಗಳು ಅಗತ್ಯವಿಲ್ಲ ಎಂದರು.ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ನೀಲಮ್ಮ ಶಾಂತಪ್ಪ ಬಿರಾದಾರ ವಹಿಸಿದ್ದರು. ಇದೇ ವೇಳೆ ಸಿಡಿಪಿಒ ಶಿಲ್ಪಾ ಹಿರೇಮಠ ಹಾಗೂ ನಿರ್ಮಲಾ ಸುರಪುರ ಅವರನ್ನು ಬೀಳ್ಕೊಡುವ ಕಾರ್ಯಕ್ರಮ ಹಾಗೂ ಅಂಗನವಾಡಿ ಕೇಂದ್ರಕ್ಕೆ 2 ಪ್ಲಾಟ್ ಭೂದಾನ ಮಾಡಿದ ಶರಣಬಸವ ಬಸವರೆಡ್ಡಿ ಅವರನ್ನು ಗೌರವಿಸಲಾಯಿತು.ಗ್ರಾಮದ ಮುಖಂಡರಾದ ಹಣಮಂತ್ರಾಯಗೌಡ ಬಿರಾದಾರ, ಸಿದ್ದಪ್ಪ ಸೌಕಾರ ಉತ್ನಾಳ, ರಾಜಶೇಖರ ಪಾಟೀಲ, ಗ್ರಾಪಂ ಸದಸ್ಯರಾದ ಅಬ್ದುಲ್ ಬಳಗಾನೂರ, ಮುಖಂಡರಾದ ಶರಣಗೌಡ ಅಂಗಡಿ, ಮಾಂತೇಶ ನಾಗರಬೆಟ್ಟ, ಸುನಿಲ ಮಾಗಿ, ಪಿಡಿಒ ಎಂ.ಎನ್.ಕತ್ತಿ, ಜಿಪಂ ಎಇಇ ವಿಲಾಸ ರಾಠೋಡ, ಎಇ ಅಶೋಕ ತೇಲಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮದ ಮುಖಂಡರು ಇತರರು ಉಪಸ್ಥಿತರಿದ್ದರು.ಯಾಳವಾರದಲ್ಲಿ ಭೂಮಿ ಪೂಜೆ: ತಾಲೂಕಿನ ಯಾಳವಾರ ಗ್ರಾಮದಲ್ಲಿ 2023-34ನೇ ಸಾಲಿನ ತಾಪಂ ಅನಿರ್ಬಂಧಿತ ಅನುದಾನದಲ್ಲಿ ಸುಮಾರು ₹ 18 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅಂಗನವಾಡಿ ಕೇಂದ್ರಕ್ಕೆ ಭೂಮಿ ಪೂಜೆಯನ್ನು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ನೆರವೇರಿಸಿದರು. ಈ ವೇಳೆ ಗ್ರಾಮದ ಪ್ರಮುಖರು, ಗ್ರಾಪಂ ಅಧ್ಯಕ್ಷ ಚನ್ನಾರಡ್ಡಿ ನ್ಯಾಮಣ್ಣವರ, ಪ್ರಮುಖರಾದ ಕೆ.ಎಂ.ಶೆಟ್ಟಿ, ಅಪ್ಪಣ್ಣ ಚಾಂದಕೊಠಗಿ, ಪಿಡಿಒ ಮಲ್ಲು ಮಸಳಿ, ಭೂ ಸೇನಾಧಿಕಾರಿ ಆನಂದ ಸೇರಿದಂತೆ ಗ್ರಾಪಂ ಸದಸ್ಯರು, ಸಿಬ್ಬಂದಿ ವರ್ಗ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.