ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ವಿವಿಧ ಕಾರ್ಮಿಕ ಸಂಘಟನೆಯ ಸದಸ್ಯರು ಬುಧವಾರ ಪಟ್ಟಣದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.ಪಟ್ಟಣದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಸಮೀಪ ಸಮಾವೇಶಗೊಂಡ ಅಸಂಖ್ಯಾತ ಕಾರ್ಯಕರ್ತೆಯರು ಸಿಐಟಿಯು ಕೆಂಪು ಬಾವುಟ ಹಿಡಿದು ಸರ್ಕಾರದ ಕಾರ್ಮಿಕ ನೀತಿಯ ವಿರುದ್ಧ ಘೋಷಣೆ ಕೂಗುತ್ತಾ, ಮೆರವಣಿಗೆಯಲ್ಲಿ ಗಾಂಧಿವೃತ್ತಕ್ಕೆ ಆಗಮಿಸಿದರು. ಅಲ್ಲಿ ಕೆಲಕಾಲ ಮಾನವ ಸರಪಳಿ ನಿರ್ಮಿಸಿ, ಅಭಿವೃದ್ಧಿಯ ಹೆಸರಲ್ಲಿ ಸ್ವಾಭಿಮಾನಿ ಕಾರ್ಮಿಕರನ್ನು ಕಾರ್ಪೋರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಬಾರದು. ಅತಿ ಹೆಚ್ಚು ಅಸಂಘಟಿತ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನಿನಡಿ ತರಬೇಕು. ದಿನಕ್ಕೆ ೬೦೦ ರು. ವೇತನ ನಿಗದಿಗೊಳಿಸಬೇಕು ಎನ್ನುವ ನಮ್ಮ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ವೇತನ ಸಂಹಿತೆಯಲ್ಲಿ ೧೫ನೇ ಐಎಲ್ಸಿಯ ಕನಿಷ್ಠ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನಗಳನ್ನು ನಿಗದಿ ಮಾಡುವ ಅಂಶಗಳು ಒಳಗೊಳ್ಳುವಂತೆ ಮಾಡಬೇಕು. ೮ ಗಂಟೆ ಕೆಲಸದ ಅವಧಿ, ಕಾಯಂ ಕೆಲಸಕ್ಕೆ ತಕ್ಕ ವೇತನ, ಸುರಕ್ಷತೆ, ಮುಷ್ಕರದ ಹಕ್ಕು, ಸಂಘ ಕಟ್ಟುವ ಹಕ್ಕನ್ನು ಹತ್ತಿಕ್ಕುವ ಕಾರ್ಮಿಕ ವಿರೋಧಿ ೪ ಸಂಹಿತೆಗಳನ್ನು ರದ್ದು ಪಡಿಸಬೇಕು. ಇಂದಿನ ಬೆಲೆಗಳಿಗೆ ಅನುಗುಣವಾಗಿ ಎಲ್ಲಾ ಸಂಘಟಿತ, ಅಸಂಘಟಿತ, ಗುತ್ತಿಗೆ ಕಾರ್ಮಿಕರು ಮತ್ತು ನೌಕರರಿಗೂ ರಾಷ್ಟ್ರವ್ಯಾಪಿ ೨೬ ಸಾವಿರ ಹಾಗೂ ರಾಜ್ಯ ವ್ಯಾಪಿ ೩೬ ಸಾವಿರ ಕನಿಷ್ಠ ವೇತನವನ್ನು ತಕ್ಷಣದಿಂದ ಜಾರಿ ಮಾಡಬೇಕು, ಕಟ್ಟಡ ಕಾರ್ಮಿಕರು, ಆಟೋ, ಟ್ಯಾಕ್ಸಿ ಚಾಲಕರು, ಮನೆ ಕೆಲಸದವರು, ಗಿಗ್ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಟೈಲರ್ ಗಳು. ಫೋಟೋಗ್ರಾಫರ್ ಗಳು, ಮೆಕ್ಯಾನಿಕ್ಸ್, ಬೀಡಿ, ಅಗರಬತ್ತಿ, ಹಂಚು, ಇಟ್ಟಿಗೆ, ಮೀನುಗಾರರು, ಇನ್ನಿತರ ಎಲ್ಲಾ ಅಸಂಘಟಿತ ಕಾರ್ಮಿಕರು, ಕೃಷಿ ತೋಟ ಕಾರ್ಮಿಕರು ಸೇರಿದಂತೆ ಎಲ್ಲಾ ವರ್ಗದ ಕಾರ್ಮಿಕರಿಗೆ ೯ ಸಾವಿರ ಪಿಂಚಿಣಿ ಹಾಗೂ ಸಾಮಾಜಿಕ ಭದ್ರತೆಯನ್ನು ಖಾತ್ರಿ ಪಡಿಸಬೇಕು ಎನ್ನುವ ಬೇಡಿಕೆಗಳ ಜೊತೆಗೆ ಒಟ್ಟು ೨೧ ಬೇಡಿಕೆಗಳುಳ್ಳ ಮನವಿ ಪತ್ರವನ್ನು ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಮೆರವಣಿಗೆ ಮೂಲಕ ತೆರಳಿ ಮನವಿ ಸಲ್ಲಿಸಿದರು.
ಮಹಿಳೆಯರು ಭಾರೀ ಸಂಖ್ಯೆಯಲ್ಲಿ ಸೇರಿದ್ದ ಕಾರಣ ಪೊಲೀಸರು ಮೆರವಣಿಗೆಗೆ ಬಿಗಿ ಬಂದೋಬಸ್ತ್ ಒದಗಿಸಿದ್ದರು. ಅಂಗನವಾಡಿ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಗೀತಾ, ಕಾರ್ಯದರ್ಶಿ ಶೈಲಜಾ, ಬಿ.ಕೆ., ಅಂಬಿಕಾ, ಸಿ.ಐ.ಟಿ.ಯು ಮುಖಂಡರಾದ ಪೃಥ್ವಿ ಹಾಗೂ ರಾಜು, ಸಿ.ಐ.ಟಿ.ಯು ತಾ. ಸಂಚಾಲಕ ಕುಮಾರಸ್ವಾಮಿ, ಕೃಷ್ಣಮೂರ್ತಿ ಹಾಗೂ ಹಲವರಿದ್ದರು.