ಕನ್ನಡಪ್ರಭ ವಾರ್ತೆ ಅರಸೀಕೆರೆ

ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ (ಎಐಯುಟಿಸಿಸಿ) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನೆಯಲ್ಲಿ ಮಾತನಾಡಿದ ಎಐಯುಟಿಸಿಸಿ ತಾಲೂಕು ಅಧ್ಯಕ್ಷೆ ನಾಗರತ್ನ, ರಾಜ್ಯ ಸರ್ಕಾರವು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಗೌರವಧನ ಹೆಚ್ಚಿಸದೆ ಕೇವಲ ಸೀರೆ ನೀಡುವ ಪ್ರಸ್ತಾಪ ಮಾಡಿರುವುದು ಅಸಮರ್ಪಕ ಎಂದು ಆಕ್ಷೇಪಿಸಿದರು. ಬಜೆಟ್‌ನಲ್ಲಿ ಕಾರ್ಯಕರ್ತೆಯರ ಸಂಭಾವನೆ ಹೆಚ್ಚಳ ಮಾಡುವ ಬದಲು ಸೀರೆ ನೀಡುವ ಘೋಷಣೆ ಮಾಡಿರುವುದನ್ನು ಸಂಘಟನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಹೇಳಿದರು.ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಂಗನವಾಡಿ, ಬಿಸಿ ಊಟ ಹಾಗೂ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮೂರು ವರ್ಷ ಕಳೆದರೂ ಸಹ ಈ ಭರವಸೆ ಈಡೇರಿಲ್ಲ ಎಂದು ಆರೋಪಿಸಿದರು. ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ತನ್ನ ಕೊನೆಯ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 1ಸಾವಿರ ಹೆಚ್ಚಿಸುವುದಾಗಿ ಘೋಷಿಸಿದ್ದರೂ ಅದು ಜಾರಿಯಾಗಿಲ್ಲ. ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ ನೀಡುವ ವಿಚಾರವನ್ನು ಜಾರಿಗೆ ತಂದಿಲ್ಲ ಎಂದು ಹೇಳಿದರು.ಇದೇ ವೇಳೆ 2011ರಿಂದ ನಿವೃತ್ತರಾಗಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡದೆ, 2023ರ ನಂತರ ನಿವೃತ್ತಿಯಾದವರಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಿರುವುದು ಅನ್ಯಾಯವಾಗಿದೆ. ಇದರ ಪರಿಣಾಮವಾಗಿ ಸುಮಾರು 20 ಸಾವಿರಕ್ಕೂ ಹೆಚ್ಚು ನಿವೃತ್ತ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕಾನೂನುಬದ್ಧ ಗ್ರಾಚ್ಯುಟಿ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದರು.ಮಹಿಳಾ ಕಾರ್ಮಿಕರ ಶ್ರಮಕ್ಕೆ ತಕ್ಕ ಸಂಭಾವನೆ ನೀಡದೆ ಕೇವಲ ಸೀರೆ ನೀಡುವುದಾಗಿ ಘೋಷಿಸಿರುವುದು ಕನಿಷ್ಠ ವೇತನವನ್ನು ನಿರಾಕರಿಸಿದಂತಾಗಿದೆ. ಆದ್ದರಿಂದ ಸೀರೆ ನೀಡುವ ಬದಲು ಆ ಅನುದಾನವನ್ನು ಗೌರವಧನ ಹೆಚ್ಚಳಕ್ಕೆ ಬಳಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.ಪ್ರತಿಭಟನೆಯ ನಂತರ ಕಾರ್ಯಕರ್ತೆಯರು ಗ್ರೇಡ್ 2 ತಹಸೀಲ್ದಾರ್‌ ಪಾಲಾಕ್ಷ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಪಾರ್ವತಮ್ಮ, ಇಂದ್ರ, ಮ್ಯಾರಿ, ಭುವನ, ಷಡಾಕ್ಷರಿ, ಲಕ್ಷ್ಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.