ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಪ್ರಸಕ್ತ ಸಾಲಿನಿಂದ ಸರಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ತೆರೆಯಲು ಹೊರಡಿಸಿದ ಸುತ್ತೋಲೆ ತಕ್ಷಣ ರದ್ದುಪಡಿಸಬೇಕು. ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು. ಅಂಗನವಾಡಿ ನೌಕರರಿಗೆ ಕೆಲಸ ಭದ್ರತೆ ಕೊಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ವತಿಯಿಂದ ಶಹಾಪುರ ನಗರದ ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸಚಿವರ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಲಾಯಿತು.ಸರಕಾರ ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಸರಕಾರಿ ಶಾಲೆಗಳಲ್ಲಿ ಆರಂಭಿಸುವ ಮೂಲಕ ಅಂಗನವಾಡಿಗಳನ್ನು ಹಂತ ಹಂತವಾಗಿ ಮುಚ್ಚುವ ಹುನ್ನಾರ ನಡೆಸುತ್ತಿದೆ. ಕೇಂದ್ರ ಸರಕಾರ ಈಗಾಗಲೇ ಐಸಿಡಿಎಸ್ ಯೋಜನೆಯ ಅರ್ಧದಷ್ಟು ಅನುದಾನವನ್ನು ಕಡಿತ ಮಾಡಿ, ಅಂಗನವಾಡಿ ಕಾರ್ಯಕರ್ತರ ಹೊಟ್ಟೆ ಮೇಲೆ ಹೊಡೆದಿದೆ. ಅದೇ ಉದ್ಯೋಗವನ್ನು ನಂಬಿ ಜೀವನ ನಡೆಸುತ್ತಿರುವ ಅಂಗನವಾಡಿ ನೌಕರರನ್ನು ಬೀದಿ ಪಾಲು ಮಾಡಲು ರಾಜ್ಯ ಸರ್ಕಾರ ಯತ್ನಿಸುತ್ತಿದ್ದು, ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಅಂಗನವಾಡಿಗಳಲ್ಲೇ ಆರಂಭಿಸಬೇಕು. ಅಂಗನವಾಡಿ ನೌಕರರಿಗೆ ಕೆಲಸದ ಭದ್ರತೆ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಅಂಗನವಾಡಿ ನೌಕರ ಸಂಘದ ಅಧ್ಯಕ್ಷೆ ಬಸಲಿಂಗಮ್ಮ ನಾಟೇಕಾರ್, ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ 36 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. ಶಾಲಾ ಕಟ್ಟಡಗಳಿಲ್ಲದ ಪರಿಸ್ಥಿತಿಗಳಿವೆ. ಸರಕಾರ ಆರ್ಥಿಕ ಮುಗ್ಗಟ್ಟಿನಲ್ಲಿರುವಾಗ ನಕಲು ಯೋಜನೆಗಳಿಂದ ಇರುವ ಮೂಲ ಯೋಜನೆ ಐಸಿಓಎಸ್‌ಗೆ ಧಕ್ಕೆ ಆಗುತ್ತಿದೆ. ಶಿಕ್ಷಣ ಇಲಾಖೆ ಈಗ ಪ್ರಾರಂಭಿಸುವ ಎಲ್‌ಕೆಜಿ , ಯುಕೆಜಿಗೆ ದಾಖಲಾಗುವ ಮಕ್ಕಳು ಐಸಿಡಿಎಸ್ ನಲ್ಲಿ ಈಗಾಗಲೇ ದಾಖಲಾಗಿರುವುದರಿಂದ ಎರಡು ಕಡೆ ಮಕ್ಕಳ ದಾಖಲಾತಿಯಾಗುತ್ತಿದೆ. ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಮತ್ತು ಪೌಷ್ಟಿಕತೆ ಎರಡರ ಬಗ್ಗೆಯೂ ಕಾಳಜಿ ವಹಿಸಲಾಗುತ್ತಿದೆ. ಹೊಸದಾಗಿ ಎಲ್‌ಕೆಜಿ ಯುಕೆಜಿ ಪ್ರಾರಂಭಿಸುವ ಆದೇಶ ನಿಲ್ಲಿಸಬೇಕು. ಮತ್ತು 1008 ಅಂಗನವಾಡಿ ಕೇಂದ್ರ ಗುರುತಿಸಿ ಅಲ್ಲಿಯೇ ಈ ತರಗತಿ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಐಸಿಡಿಎಸ್ ಅಡಿಯಲ್ಲಿರುವ ಮಕ್ಕಳ ಸ್ಥಿತಿಗತಿಯ ಬಗ್ಗೆ ಅಧ್ಯಯನ ಮಾಡಬೇಕು. ಅಧ್ಯಯನ ಮಾಡಲು ಮಕ್ಕಳ ತಜ್ಞರು, ಮಕ್ಕಳ ವೈದ್ಯರು, ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದ ತಜ್ಞರು, ನಮ್ಮ ಸಂಘದ ಪ್ರತಿನಿಧಿಗಳು, ಎರಡು ಇಲಾಖೆ ಪ್ರಮುಖರನ್ನೊಳಗೊಂಡ ಸಮಿತಿ ರಚಿಸಿ ಕಾಲಮಿತಿ ಒಳಗೆ ವರದಿ ನೀಡಲು ಸೂಚಿಸಬೇಕು. ಈ ವರದಿ ಬರುವ ತನಕ ಶಿಕ್ಷಣ ಇಲಾಖೆ ಹೊಸದಾಗಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸದ ಹಾಗೆ ಸೂಚಿಸಬೇಕು. ಅಲ್ಲಿವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ ಮಾತನಾಡಿದರು. ಅಂಗನವಾಡಿ ನೌಕರರ ಸಂಘದ ತಾಲೂಕು ಕಾರ್ಯದರ್ಶಿ ಯಮನಮ್ಮ ದೋರನಹಳ್ಳಿ, ಉಪಾಧ್ಯಕ್ಷೆ ರೇಣುಕಾ ಗೋಗಿ, ಖಜಾಂಚಿ ಮಾಹಾದೇವಿ ಕಾಡಮಗೇರಾ, ಮಹಾನಂದ, ಸಂಪತ್ ಕುಮಾರಿ, ಮಂಜುಳಾ, ಅನ್ನಪೂರ್ಣ, ಶಾರದಾದೇವಿ, ಇಂದಿರಾ, ಸೇರಿ ಹಲವು ಅಂಗನವಾಡಿ ಕಾರ್ಯಕರ್ತೆಯರು ಭಾಗವಹಿಸಿದ್ದರು.