ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿ ಯೋಜನೆಗೆ ಅನುದಾನ ಕಡಿತ ಹಾಗೂ ಗೌರವಧನ ಹೆಚ್ಚಿಸದ ಕೇಂದ್ರ ಸರ್ಕಾರದ ನೀತಿಯನ್ನು ಖಂಡಿಸಿ ಡಾ. ಬಾಬು ಜಗಜೀವನರಾಮ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.ತಾಲೂಕಿನ ಅಂಗನವಾಡಿ ಕಾರ್ಯಕರ್ತೆರ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಜಾ ಜಿ.ಪಿ. ಮಾತನಾಡಿ, ಕೇಂದ್ರ ಸರ್ಕಾರ ಕಳೆದ ಐದು ವರ್ಷಗಳಿಂದ ಅನುದಾನವನ್ನು ಹೆಚ್ಚಳ ಮಾಡದೇ, ಕೊಡುತ್ತಿರುವ ಅನುದಾನವನ್ನು ಕಡಿತ ಮಾಡಿದ ಕಾರಣದಿಂದ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳವಾಗಿಲ್ಲ, ಜತೆಗೆ ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಗೌರವಧನ ನೀಡಲಾಗುತ್ತಿದೆ. ಖಾಸಗಿ ಕಟ್ಟಡಗಳ ಬಾಡಿಗೆ ನೀಡುವಲ್ಲಿ ವಿಳಂಬ, ಅಗತ್ಯ ಸಮಯದಲ್ಲಿ ಮಕ್ಕಳ ಪೌಷ್ಟಿಕ ಅಹಾರ ಪೂರೈಕೆಯಲ್ಲಿ ವಿಳಂಬ ಮತ್ತು ಬಜೆಟ್ ಕಡಿತಗೊಳಿಸಿದ ಕಾರಣದಿಂದ ೨ ಕೋಟಿ ತಾಯಂದಿರ, ೮ ಕೋಟಿ ಮಕ್ಕಳ ಪೌಷ್ಟಿಕ ಅಹಾರ ಮತ್ತು ಶಿಕ್ಷಣದ ಹಕ್ಕನ್ನು ಕಾಪಾಡಲು ಸಾಧ್ಯವಾಗುತ್ತಿಲ್ಲ, ಕಳೆದ ಐದು ವರ್ಷಗಳಿಂದ ಅನುದಾನ ಹಾಗೂ ವೇತನ ಹೆಚ್ಚಳ ಮಾಡದೇ ಕೇಂದ್ರ ಸರ್ಕಾರವು ಸಬ್ ಕೆ ವಿಕಾಸ್ ಎಂಬುದು ಸಬ್ ಕಾ ವಿನಾಶ್ ಎಂಬ ಅರ್ಥ ಮೂಡಿಸುತ್ತಿದೆ ಎಂದು ನೋವಿನಿಂದ ಹೇಳಬೇಕಾಗಿದೆ. ಸರ್ಕಾರದ ಈ ದೋರಣೆಯನ್ನು ಫೆ.೧೬ ರಂದು ದೇಶದ್ಯಾಂತ ಮತ್ತೊಮ್ಮೆ ಅಂಗನವಾಡಿ ನೌಕರರು ಪ್ರತಿಭಟಿನೆ ನಡೆಸಲಿದ್ದಾರೆ ಎಂಬ ಎಚ್ಚರಿಕೆಯನ್ನು ಕೊಡಲಾಗುತ್ತದೆ ಎಂದರು.
ಪ್ರತಿಭಟನೆಯಲ್ಲಿ ತಾಲೂಕು ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವೀಣಾ ಕೆ.ಪಿ., ಖಜಾಂಚಿ ಗೀತಾ ಎಚ್.ಕೆ., ಡಿ.ಉಷಾ, ಜ್ಯೋತಿ ಬಿ.ಪಿ., ಶಾಂತಿ ಎಸ್.ಪಿ., ಶೋಭ, ರಂಗಮ್ಮ ಎಂ.ಎಸ್., ಪ್ರತಿಭಾ ಇದ್ದರು.ಹೊಳೆನರಸೀಪುರ ಪಟ್ಟಣದ ಡಾ. ಬಾಬು ಜಗಜೀವನರಾಮ್ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಕೇಂದ್ರ ಸರ್ಕಾರದ ನೀತಿಯನ್ನು ಧಿಕ್ಕರಿಸಿ ಪ್ರತಿಭಟನೆ ನಡೆಸಿದರು.