ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಪ್ರತಿ ವರ್ಷ ಆರ್‌ಬಿಐ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಆರ್ಥಿಕ ಸಾಕ್ಷರತಾ ಸಪ್ತಾಹ ಹಮ್ಮಿಕೊಳ್ಳಲಾಗುತ್ತಿದೆ. ಈ ವರ್ಷ ಮಹಿಳೆಯರನ್ನು ಕೇಂದ್ರೀಕರಿಸಿ ಆರ್ಥಿಕ ಸಾಕ್ಷರತಾ ಸಪ್ತಾಹ ಆಯೋಜಿಸಲಾಗಿದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಅರುಣ್ ಕುಮಾರ್ ತಿಳಿಸಿದರು.ನಗರದ ಬಾಲ ಭವನದಲ್ಲಿ ಆರ್‌ಬಿಐ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಹಾಗೂ ಸಾರ್ತಿ ಆರ್ಥಿಕ ಸಾಕ್ಷರತಾ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತರಿಗೆ ಆಯೋಜಿಸಿದ್ದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತರು ಮಾಸಿಕ ಉಳಿತಾಯದ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಆರ್ಥಿಕ ಸಮಾಲೋಚಕರಾದ ಕೆ.ಪಿ.ಅರುಣಕುಮಾರಿ ಅವರು, ಮಾಸಿಕ ಉಳಿತಾಯ, ಕುಟುಂಬ ಬಜೆಟ್ ನಿರ್ವಹಣೆ, ವಿಮೆ ಅವಶ್ಯಕತೆ, ಆದಾಯ ಹೆಚ್ಚಿಸಲು ಕೈಗೊಳ್ಳಬಹುದಾದ ಅವಕಾಶಗಳು, ಸರ್ಕಾರದ ವಿವಿಧ ಯೋಜನೆಗಳು , ಸಾಲ ಸೌಲಭ್ಯ ಹಾಗೂ ಆದಾಯಕ್ಕಿಂತ ಖರ್ಚು ಕಡಿಮೆ ಮಾಡುವ ಮೂಲಕ ಆರ್ಥಿಕ ಶಿಸ್ತು ಬೆಳೆಸಿಕೊಳ್ಳಲು ಮಾಹಿತಿ ನೀಡಿದರು.ಬ್ಯಾಂಕ್ ಆಫ್ ಬರೋಡ ಸ್ವ ಉದ್ಯೋಗ ತರಬೇತಿ ಸಂಸ್ಥೆ ಪ್ರಸನ್ನ ಕುಮಾರ್ ಮಾತನಾಡಿ, ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದೊರೆಯುವ ಉಚಿತ ತರಬೇತಿಗಳನ್ನು ತಮ್ಮ ಕುಟುಂಬದ ಸದಸ್ಯರು ಸದುಪಯೋಗ ಪಡಿಸಿಕೊಂಡು ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಲು ಕೋರಿದರು.
ನಂತರ ಕಾರ್ಮಿಕ ಶಿಕ್ಷಣ ಮಂಡಳಿ ಶಿಕ್ಷಣ ಅಧಿಕಾರಿ ಸತೀಶ್ ಕುಮಾರ್ , ಅಸಂಘಟಿತ ವರ್ಗದ ಕಾರ್ಮಿಕರಿಗಾಗಿ ಇರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಆರ್ ಬಿ ಐ ನ ಆರ್ಥಿಕ ಸಾಕ್ಷರತಾ ಸಪ್ತಾಹದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಅತಿಥಿಗಳಾಗಿ ಅಂಗನವಾಡಿ ಕೇಂದ್ರದ ಮೇಲ್ವಿಚಾರಕರಾದ ಶಕುಂತಲಾ ಮತ್ತು ಜ್ಯೋತಿ ಭಾಗವಹಿಸಿದ್ದರು.ಸಂಪ್ರದಾಯಕ ಉಡುಗೆ ತೊಟ್ಟು ಸಂಭ್ರಮಿಸಿದ ವಿದ್ಯಾರ್ಥಿಗಳು
ಪಾಂಡವಪುರ:ತಾಲೂಕಿನ ಬನ್ನಂಗಾಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಪ್ರದಾಯ ದಿನದ ಅಂಗವಾಗಿ ವಿದ್ಯಾರ್ಥಿಗಳು ಸಂಪ್ರದಾಯಕ ಉಡುಗೆ ತೊಡುಗೆ ತೊಟ್ಟು ಸಂಭ್ರಮಿಸಿದರು.
ಕಾಲೇಜಿಗೆ ಹಿಂದೂ ಸಂಪ್ರದಾಯದಂತೆ ಹೆಣ್ಣುಮಕ್ಕಳು ಸೀರೆ, ರವಿಕೆ ತೊಟ್ಟು ಆಗಮಿಸಿದರೆ, ಗಂಡು ಮಕ್ಕಳು ಬಿಳಿ ಪಂಚೆ, ಶರ್ಟ್ ಹಾಕಿಕೊಂಡು ಬರುವ ಮೂಲಕ ಸಂಭ್ರಮಿಸಿದರು.ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಕೆ.ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಂಪ್ರದಾಯ, ಸಂಸ್ಕೃತಿ ಕಣ್ಮರೆಯಾಗುತ್ತಿವೆ. ಹಾಗಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಲ್ಲಿ ಹಿಂದೂ ಧರ್ಮದ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ವಿದ್ಯಾರ್ಥಿಗಳು ನಮ್ಮ ಸಂಪ್ರದಾಯವನ್ನು ಎಂದಿಗೂ ಮರೆಯಬಾರದು ಎಂದರು.
ಈ ವೇಳೆ ಮುಖ್ಯ ಶಿಕ್ಷಕರಾದ ಓಂಕಾರಪ್ಪ, ಮಹೇಶ್, ಪಂಚಾಕ್ಷರಿ ಅವರನ್ನು ಅಭಿನಂದಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಶಂಕರ್, ಪ್ರಾಂಶುಪಾಲ ಬಸವರಾಜು ಉಪನ್ಯಾಸಕರು ಇದ್ದರು.