ಸಾರಾಂಶ
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರನ್ನು ಖಾಯಂ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಅಹೋರಾತ್ರಿ ಧರಣಿ ಪ್ರಾರಂಭಿಸಿತು.
ಕನ್ನಡಪ್ರಭ ವಾರ್ತೆ ಕೊಪ್ಪಳ
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರನ್ನು ಖಾಯಂ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಕೊಪ್ಪಳ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಅಹೋರಾತ್ರಿ ಧರಣಿ ಪ್ರಾರಂಭಿಸಿತು.ಎರಡು ದಿನಗಳ ನಡೆಯುವ ಧರಣಿಯಲ್ಲಿ ನೂರಾರು ಸಂಖ್ಯೆಯ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಭಾಗವಹಿಸಿದ್ದಾರೆ.
ಜಿಲ್ಲಾಡಳಿತ ಭವನದ ಎದುರಿನಲ್ಲಿಯೇ ಟೆಂಟ್ ಹಾಕಿ, ಧರಣಿ ನಡೆಸುತ್ತಿದ್ದು, ಬೆಳಗಾವಿ ಅಧಿವೇಶನದಲ್ಲಿಯೇ ಈ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ಶಿಶು ಅಭಿವೃದ್ಧಿ ಯೋಜನೆ ಪ್ರಾರಂಭವಾಗಿ 50 ವರ್ಷ ಆಗಿದ್ದರೂ ಸಹ ಅದರಲ್ಲಿ ಕೆಲಸ ಮಾಡುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇಂದಿಗೂ ಸಹ ಅತಂತ್ರ ಬದುಕು ಸಾಗಿಸುತ್ತಿದ್ದಾರೆ. ಅವರಿಗೆ ನ್ಯಾಯ ಸಿಗುವಂತೆ ಆಗಬೇಕು. ಮೂರು ಮತ್ತು ನಾಲ್ಕನೇ ದರ್ಜೆ ನೌಕರರು ಎಂದು ಪರಿಗಣಿಸಿ, ಖಾಯಂ ಮಾಡಿ, ಸರ್ಕಾರದ ನಿಯಮಾನುಸಾರ ನೀಡಬೇಕಾದ ವೇತ ನೀಡಬೇಕು. ಗ್ರಾಚ್ಯುಟಿ ನೀಡಬೇಕು. ಕೇಂದ್ರ ಸರ್ಕಾರ ಗೌರವಧನವನ್ನು ₹26 ಸಾವಿರಕ್ಕೆ ಹೆಚ್ಚಳ ಮಾಡಬೇಕು. ರಾಜ್ಯ ಸರ್ಕಾರ ₹15 ಸಾವಿರ ಗೌರವ ಧನ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.
ಸಿಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಸಿಂಸಾಹ ಸರ್ದಾರ, ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಕಲಾವತಿ ಮೇಣದಾಳ, ಕಾರ್ಯದರ್ಶಿ ಗಿರೀಜಾ, ಖಜಾಂಚಿ ಲಲಿತಾ ಅರಳಿ, ದುರ್ಗಮ್ಮ ಅನ್ನಪೂರ್ಣ, ಶಿವಲೀಲಾ ಗೀತಾ, ಉಮಾದೇವಿ ಪಾರ್ವತಿ, ಗೌಸಸಾಬ ನದಾಫ್ ಮೊದಲಾದವರು ಇದ್ದರು.