ಸಾರಾಂಶ
ಚಾಮರಾಜನಗರದಲ್ಲಿ ಜಿಲ್ಲಾ ಅಂಗನವಾಡಿ ನೌಕರರ ಸಂಘದ ಪ್ರದಾನ ಕಾರ್ಯದರ್ಶಿ ಎ.ನಾಗಮಣಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮೇ ೨೦ ರಾಜ್ಯಾದ್ಯಂತ ಎಲ್ಲ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ನಾಗಮಣಿ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗನವಾಡಿ ನೌಕರರು ೫೦ ವರ್ಷಗಳಿಂದ ಐಸಿಡಿಎಸ್ ಅಡಿಯಲ್ಲಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂ ಮಾಡುವ ತನಕ ಕನಿಷ್ಠ ವೇತನ ನೀಡಬೇಕು, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ನಿರಂತರವಾಗಿ ಕೇಳಲಾಗುತ್ತಿದೆ ಎಂದರು.ದೇಶದ ಕಾರ್ಪೊರೇಟ್ ಬಂಡವಾಳಗಾರರಿಗೆ ೧೫.೩೨ ಲಕ್ಷ ಕೋಟಿ ಸಾಲ ಮನ್ನಾ, ೧.೯೭ ಲಕ್ಷ ಕೋಟಿ ಸಬ್ಸಿಡಿಗಳನ್ನು ಉದಾರವಾಗಿ ಕೊಡುವ ಕೇಂದ್ರ ಸರ್ಕಾರ ದೇಶದ ಭವಿಷ್ಯವನ್ನು ರೂಪಿಸಲು ಪೂರಕವಾಗಿ ಮಾನವ ಸಂಪನ್ಮೂಲದ ಬೆಳವಣಿಗಳಿಗೆ ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ ಎಂದು ಸಬೂಬು ಹೇಳುತ್ತಿದೆ ಎಂದರು.ಇಂತಹ ಧೋರಣೆಗಳ ವಿರುದ್ಧ ಅಂಗನವಾಡಿ ನೌಕರರು ಸಂಘ ಕಟ್ಟಿ, ಮುಷ್ಕರಗಳ ಮುಖಾಂತರ ಹೋರಾಟಗಳನ್ನು ನಡೆಸುತ್ತಿದ್ದರು. ಆದರೆ ಈಗ ದೇಶದ ೨೯ ಕಾರ್ಮಿಕ ಕಾನೂನುಗಳನ್ನು ೪ ಸಂಹಿತೆಗಳನ್ನಾಗಿ ಮಾಡುವ ಮುಖಾಂತರ ಸಂಘ ಕಟ್ಟುವ ಹಕ್ಕು ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿಭಂಧಗಳನ್ನು ತರುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ ಎಂದರು.ರಾಜ್ಯ ಸರ್ಕಾರ ೨೦೨೩ ಏ.೧ ರಿಂದ ೧೯೭೨ ಗ್ರಾಜ್ಯುಟಿ ಪಾವತಿ ಕಾಯ್ದೆಯನ್ನು ಅನ್ವಯ ಮಾಡಿ ಈಗಾಗಲೇ ೨೮೭ ಕಾರ್ಯಕರ್ತರಿಗೆ ಮತ್ತು ೧೨೦೪ ಸಹಾಯಕಿಯರಿಗೆ ಪಾವತಿಸುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಈ ಕಾಯ್ದೆಯನ್ನು ೨೦೧೧ ರಿಂದ ನಿವೃತ್ತಿಯಾದ ೧೦೩೧೧ ಕಾರ್ಯಕರ್ತೆಯರು, ೧೧೯೮೦ ಸಹಾಯಕಿಯರಿಗೂ ಅನ್ವಯಿಸಬೇಕೆಂದೂ ಒತ್ತಾಯಿಸಲಾಗುತ್ತಿದೆ ಎಂದರು, ೨೬ ಸಾವಿರ ಕನಿಷ್ಟ ವೇತನ, ೧೦ ಸಾವಿರ ಮಾಸಿಕ ಪಿಂಚಣಿ ಕೊಡಬೇಕು. ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಕೆಲಸಗಳಲ್ಲಿ ಅಂಗನವಾಡಿ ನೌಕರರಿಗೆ ತೊಂದರೆ ಕೊಡಬಾರದು. ಈ ಬೇಡಿಕೆಗಳಿಗಾಗಿ ಒತ್ತಾಯಿಸಿ ಮೇ ೨೦ ರಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ, ಸಾಮೂಹಿಕ ಬಂಧನಕ್ಕೊಳಗಾಗುವ ಮುಖಾಂತರ ಸಾರ್ವತ್ರಿಕ ಮುಷ್ಕರದಲ್ಲಿ ಪಾಲ್ಗೊಳ್ಳಲಾಗುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷೆ ಕೆ. ಸುಜಾತ, ಸುಮಿತ್ರ, ಶಾಹಿದಾಬಾನು, ಜಯಮಾಲ, ಸುಜಿಯಾ, ಮೀನಾಕ್ಷಿ ಇದ್ದರು.