ಸಾರಾಂಶ
ಕನ್ನಡಪ್ರಭ ವಾರ್ತೆ ಯಲಬುರ್ಗಾ
ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಕಲಿಕೆಯ ಗುಣಮಟ್ಟ ಸಂತಸ ತಂದಿದೆ ಎಂದು ರಾಜಸ್ಥಾನದ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳ ವೀಕ್ಷಣೆ ತಂಡದ ರಾಜೇಂದ್ರಸಿಂಗ್ ಹೇಳಿದರು.ತಾಲೂಕಿನ ವಿವಿಧ ಅಂಗನವಾಡಿ ಕೇಂದ್ರಗಳ ಶಾಲಾ ಪೂರ್ವ ಶಿಕ್ಷಣ ವ್ಯವಸ್ಥೆ, ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆಯಲು ರಾಜಸ್ಥಾನದಿಂದ ಆಗಮಿಸಿದ್ದ ತಂಡದ ಸದಸ್ಯರ ಜೊತೆ ವೀಕ್ಷಿಸಿ ಮಾತನಾಡಿದ ಅವರು, ತಾಲೂಕಿನ ಅಂಗನವಾಡಿ ಕೇಂದ್ರಗಳು ಮೂಲಭೂತ ಸೌಕರ್ಯಗಳನ್ನು ಒಳಗೊಂಡು ಹಲವಾರು ವಿಶಿಷ್ಟತೆ ಹೊಂದಿವೆ. ಶಿಕ್ಷಕಿಯರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.ತಾಲೂಕಿನ ಪ್ರತಿಯೊಂದು ಅಂಗನವಾಡಿ ಕೇಂದ್ರಗಳು ಮಾದರಿಯಾಗಿವೆ. ಯೋಜನಾಧಿಕಾರಿಗಳು ಎಲ್ಲ ಕೇಂದ್ರಗಳ ಮೇಲೆ ನಿಗಾ ವಹಿಸುವ ಮೂಲಕ ಒಳ್ಳೆಯ ಗುಣಮಟ್ಟ ಹೊಂದಿವೆ. ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಮುಟ್ಟಿಸುವ ಪ್ರಯತ್ನವಾಗುತ್ತಿದೆ. ಜತೆಗೆ ಅಪೌಷ್ಠಿಕ ನಿವಾರಣೆಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ಇಲ್ಲಿಯ ಕೇಂದ್ರಗಳ ರೀತಿ ರಾಜಸ್ಥಾನ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸಲು ವರದಿ ತಯಾರಿಸುತ್ತೇವೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ನಮ್ಮ ತಾಲೂಕಿನಲ್ಲಿ ಅಂಗನವಾಡಿ ಕೇಂದ್ರಗಳಿಗೆ ಪೂರಕ ಪೌಷ್ಟಿಕ ಆಹಾರ ಪದ್ಧತಿಗೆ ಸರ್ಕಾರ ಒತ್ತು ನೀಡಿದೆ, ಗರ್ಭಿಣಿ ಹಾಗೂ ಬಾಣಂತಿಯರು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಸುಧಾರಣೆ ಕಾಣಲು ಅನುಕೂಲವಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಕಷ್ಟು ಮಕ್ಕಳಲ್ಲಿ ಅಪೌಷ್ಟಿಕತೆ ದೂರಾಗಿದೆ. ಬಹುತೇಕ ಅಂಗನವಾಡಿಗಳಿಂದಲೇ ಕಲಿಕೆ ಆರಂಭಿಸಿದ್ದೇವೆ. ಶಾಲಾ ಶಿಕ್ಷಣದ ಪೂರ್ವದಲ್ಲಿ ಕಲಿಕೆಯೆಡೆಗೆ ಮಗುವಿನ ಆಸಕ್ತಿ ಹೆಚ್ಚಿಸುವುದು, ವಯಸ್ಸಿಗೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಮಗುವಿಗೆ ಅಗತ್ಯ ಜ್ಞಾನ ನೀಡುವುದು, ಸಾಮಾಜಿಕವಾಗಿ ಬೆರೆಯುವಿಕೆ ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ಮಗುವನ್ನು ಸಿದ್ಧಗೊಳಿಸುವಿಕೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದರು.ಇದಕ್ಕೆ ಪೂರಕವಾಗಿ ನಮ್ಮ ಅಂಗನವಾಡಿ ಸಿಬ್ಬಂದಿಗೆ ತರಬೇತಿ ನೀಡಲಾಗುತ್ತದೆ. ಸ್ಥಳೀಯವಾಗಿ ಸಿಗುವ ಸಂಪನ್ಮೂಲ ಬಳಸಿಕೊಂಡು ಮಕ್ಕಳಿಗೆ ಬಣ್ಣಗಳು, ಪ್ರಾಣಿಗಳು, ಆಕಾರಗಳ ಗುರುತಿಸುವಿಕೆ, ಗಣಿತದ ಆಕಾರಗಳ ಗ್ರಹಿಸುವಿಕೆ ಮುಂತಾದವುಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.
ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಗಳ ವೀಕ್ಷಣೆ ಕಲಿಕಾ ಸಾಮಗ್ರಿಗಳ ವೀಕ್ಷಣೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಜೊತೆ ತಂಡದ ಸದಸ್ಯರು ಮಾಹಿತಿ ಪಡೆದುಕೊಂಡರು. ತಾಲೂಕಿನ ಶಾಲಾ ಪೂರ್ವ ಶಿಕ್ಷಣದ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ತಂಡದ ಶೈಲಾಜಾ, ಅಂಗನವಾಡಿ ಮೇಲ್ವಿಚಾರಕರು ಹಾಗೂ ಕಾರ್ಯಕರ್ತೆಯರು ಇದ್ದರು.