ಕನ್ನಡಪ್ರಭ ವಾರ್ತೆ ಮೈಸೂರು
ಕಲೆಗೆ ಜಾತಿ, ಪಂಥಗಳ ಸಿದ್ಧಾಂತ ಜೋತು ಬೀಳಬಾರದು, ಸ್ಪರ್ಶಿಸಬಾರದು. ಇದರಿಂದ ನಿಜವಾದ ಕಲೆ ಉಳಿಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ತಿಳಿಸಿದರು.ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ನಾಲ್ವಡಿ ಸೋಷಿಯಲ್ ಕಲ್ಚರಲ್ ಅಂಡ್ ಎಜುಕೇಷನಲ್ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅನಿಕೇತನ- ಉಚಿತ ಜನಪದ ಮತ್ತು ರಂಗ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಲೆ, ಸಾಹಿತ್ಯ, ಸಂಸ್ಕೃತಿ ರಂಗಭೂಮಿಯ ಆಶಾಕಿರಣಗಳಾಗಿದ್ದು, ದೇಶದ ಬಹುದೊಡ್ಡ ಆಸ್ತಿಯಾಗಿವೆ. ಕಲೆ ಉಳಿಸುವ ನಿಟ್ಟಿನಲ್ಲಿ ರಂಗಭೂಮಿ, ರಂಗ ಸಂಸ್ಥೆಗಳು ಸಾಗುತ್ತಿವೆ ಎಂದು ಅವರು ಹೇಳಿದರು.ಜನಪದ ಗಾಯಕ ಮೈಸೂರು ಗುರುರಾಜ್ ಮಾತನಾಡಿ, ಮಹಾಶರಣ ಮಾದಪ್ಪ ನಾಟಕದ ಕಥೆ ನಾನು ಬರೆದಿದ್ದಲ್ಲ. ನನ್ನ ಹಿರಿಯರು ಊರೂರು ಸುತ್ತಿ ಹಾಡಿದ ಜಾನಪದವನ್ನು ನನಗೆ ಧಾರೆ ಎರೆದರು. ಅದನ್ನು ಹಾಡುವುದರ ಜೊತೆಗೆ ಅಕ್ಷರಕ್ಕಿಳಿಸಲಾಗಿದೆ. ಮಂಟೇಸ್ವಾಮಿ ಮತ್ತು ಮಾದಪ್ಪ ಸಮಾನತೆಯ ಸರದಾರರು. ಉತ್ತರದಿಂದ ಬಂದು ದಕ್ಷಿಣದಲ್ಲಿ ನೆಲೆಸಿ ಸಮಾನತೆ ಸಾರಿದರು, ಅದನ್ನು ವಿವರಿಸಿದ್ದೇನೆ. ಅದರಲ್ಲಿ ಪ್ರೀತಿ, ವಿಶ್ವಾಸ, ಹೊಂದಾಣಿಕೆ ಹಾಗೂ ಅವರ ಆಶಯವಿದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಮಾಜ ಸೇವಕ ಅಹಿಂದ ಜವರಪ್ಪ, ದೇವರತ್ನ ಫೌಂಡೇಷನ್ ಅಧ್ಯಕ್ಷ ಶಿವಪ್ರಸಾದ್, ರಾಮಣ್ಣ, ಟ್ರಸ್ಟ್ ಸಂಸ್ಥಾಪಕ ದಿನೇಶ್ ಚಮ್ಮಾಳಿಗೆ, ಕಲಾವಿದ ಕೃಷ್ಣಮೂರ್ತಿ ತಲಕಾಡು ಮೊದಲಾದವರು ಇದ್ದರು.
ನಂತರ ನಾಲ್ವಡಿ ಟ್ರಸ್ಟ್ ಸಂಸ್ಥಾಪಕ ದಿನೇಶ್ ಚಮ್ಮಾಳಿಗೆ ನಿರ್ದೇಶನದ ಮಹಾಶರಣ ಮಾದಪ್ಪ ನಾಟಕ ಪ್ರದರ್ಶನವಾಯಿತು.
-----------------eom/mys/shekar/