ಮಂಗಳೂರು: ಸುದೀರ್ಘ 114 ವರ್ಷಗಳ ಇತಿಹಾಸ ಇರುವ ಮಂಗಳೂರಿನ ಎಂಸಿಸಿ ಬ್ಯಾಂಕ್ ಈ ಮಾರ್ಚ್‌ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಎಲ್ಲ ವ್ಯವಹಾರ ಮಾನದಂಡಗಳಲ್ಲಿ ಗಮನಾರ್ಹ ಸಾಧನೆ ಮಾಡಿದ್ದು, 13 ಕೋಟಿ ರು. ಲಾಭ ದಾಖಲಿಸಿದೆ.ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಬ್ಯಾಂಕ್‌ನ ಅಧ್ಯಕ್ಷ ಅನಿಲ್‌ ಲೋಬೊ, ಪ್ರಸ್ತುತ ಆಡಳಿತ ಮಂಡಳಿಯು 2018ರಲ್ಲಿ ಬ್ಯಾಂಕಿನ ಆಡಳಿತದ ಚುಕ್ಕಾಣಿ ಹಿಡಿದಾಗ 500 ಕೋಟಿ ರು. ಇದ್ದ ಒಟ್ಟು ವ್ಯವಹಾರ ಕಳೆದ ಏಳೂವರೆ ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಇದು ಬ್ಯಾಂಕಿನ ಚರಿತ್ರೆಯಲ್ಲಿಯೇ ಅತಿ ದೊಡ್ಡ ದಾಖಲೆ. ಬ್ಯಾಂಕಿನ ನೆಟ್‌ವರ್ತ್ 83.76 ಕೋಟಿ ರು.ನಿಂದ 91.80 ಕೋಟಿ ರು.ಗೆ ಏರಿಕೆಯಾಗಿದೆ ಎಂದು ಹೇಳಿದರು.

ಬ್ಯಾಂಕ್ ಆರ್ಥಿಕ ವರ್ಷದಲ್ಲಿ ನಿಗದಿಪಡಿಸಿದ್ದ ಠೇವಣಿಗಳು ಹಾಗೂ ಸಾಲಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದೆ. ಆರ್ಥಿಕ ವರ್ಷದಲ್ಲಿ 285 ಕೋಟಿ ರು. ಒಟ್ಟು ವ್ಯವಹಾರ ದಾಖಲಿಸಿದ್ದು, ಇದು ಬ್ಯಾಂಕಿನ ದೃಢವಾದ ಸಾಧನೆ, ಸ್ಥಿರವಾದ ಬೆಳವಣಿಗೆ ಹಾಗೂ ಪರಿಣಾಮಕಾರಿ ವ್ಯವಹಾರ ತಂತ್ರಗಳನ್ನು ಪ್ರತಿಬಿಂಬಿಸುತ್ತದೆ. ಎನ್ಆರ್‌ಐ ಗ್ರಾಹಕರ ನಿರಂತರ ಬೆಂಬಲ ಕೂಡ ಬ್ಯಾಂಕಿನ ಅಭಿವೃದ್ದಿಗೆ ಕಾರಣವಾಗಿದೆ. ನಿವ್ವಳ ಎನ್‌ಪಿಎ ಇಳಿಕೆಗೆ ನಿರಂತರ ಪ್ರಯತ್ನ ನಡೆಸಿ, ಅದನ್ನು ಒಟ್ಟು ಮುಂಗಡಗಳ ಶೇ.1.25ಕ್ಕೆ ತಗ್ಗಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಂಕ್‌ನ ಒಟ್ಟು ವ್ಯವಹಾರ 1525 ಕೋಟಿ ರು. ತಲುಪಿದ್ದು, ಶೇ.23 ಏರಿಕೆ ಸಾಧಿಸಿದೆ ಎಂದು ಅನಿಲ್‌ ಲೋಬೊ ತಿಳಿಸಿದರು.

ರಾಜ್ಯಾದ್ಯಂತ ಕಾರ್ಯಾಚರಣೆ: ಆರಂಭದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲೇ ಸೇವೆ ನೀಡುತ್ತಿದ್ದ ಎಂಸಿಸಿ ಬ್ಯಾಂಕ್, ಇದೀಗ ರಾಜ್ಯಾದ್ಯಂತ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಬೈಂದೂರಿನಲ್ಲಿ 20ನೇ ಶಾಖೆ ಹಾಗೂ ಸಂತೆಕಟ್ಟೆಯಲ್ಲಿ 21ನೇ ಶಾಖೆಯನ್ನು ಆರಂಭಿಸಿದೆ. ಕುಲಶೇಖರ ಶಾಖೆಯನ್ನು ಸ್ವಂತ ಕಟ್ಟಡಕ್ಕೆ ಸುಸಜ್ಜಿತ ಸೌಲಭ್ಯದೊಂದಿಗೆ ಸ್ಥಳಾಂತರಿಸಲಾಗಿದೆ. ಬೆಳ್ಮಣ್, ಸುರತ್ಕಲ್, ಉಡುಪಿ, ಬೆಳ್ತಂಗಡಿ, ಸಂತೆಕಟ್ಟೆ, ಕಿನ್ನಿಗೋಳಿ ಹಾಗೂ ಕುಲಶೇಖರದಲ್ಲಿ ಹೊಸ 7 ಎಟಿಎಂಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು ಎಟಿಎಂಗಳ ಸಂಖ್ಯೆ 15ಕ್ಕೆ ಏರಿದೆ ಎಂದರು.


4 ಹೊಸ ಶಾಖೆ ಯೋಜನೆ: 2026-27ನೇ ವರ್ಷದಲ್ಲಿ 4 ಹೊಸ ಶಾಖೆಗಳನ್ನು ತೆರೆಯಲು ಯೋಜನೆ ಹಾಕಲಾಗಿದ್ದು, ಶಾಖೆಗಳ ಸಂಖ್ಯೆ 25ಕ್ಕೆ ಏರಲಿದೆ. ಈಗಾಗಲೇ 22ನೇ ಶಾಖೆಯನ್ನು ದೇರಳಕಟ್ಟೆಯಲ್ಲಿ ಮತ್ತು 23ನೇ ಶಾಖೆಯನ್ನು ಕಟಪಾಡಿಯಲ್ಲಿ ತೆರೆಯಲು ಅನುಮತಿ ದೊರೆತಿದೆ. ಕರ್ನಾಟಕದಲ್ಲಿ ಎನ್ಆರ್‌ಐ ಸೌಲಭ್ಯ ಹೊಂದಿರುವ ಎರಡನೇ ನಗರ ಪಟ್ಟಣ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಎಂಸಿಸಿ ಬ್ಯಾಂಕ್‌ ಪಾತ್ರವಾಗಿದೆ ಎಂದ ಅವರು, ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿದ್ದು, ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಸಮಾನವಾದ ಎಲ್ಲ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸುತ್ತದೆ. ರಾಜ್ಯದಾದ್ಯಂತ ಶಾಖೆಗಳ ವಿಸ್ತರಣೆಯತ್ತವೂ ಗಮನ ಹರಿಸಿದೆ ಎಂದರು.

2025- 26ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ 13 ಕೋಟಿ ರು. ತೆರಿಗೆ ಪೂರ್ವ ಲಾಭ ದಾಖಲಿಸಿದ್ದು, 872.88 ಕೋಟಿ ರು. ಠೇವಣಿ ಹೊಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 23.74 ಏರಿಕೆ ಕಂಡಿದೆ. 652.06 ಕೋಟಿ ರು. ಸಾಲ ನೀಡಿದ್ದು, ಶೇ.21.7% ವೃದ್ಧಿ ಸಾಧಿಸಿದೆ. ದುಡಿಯುವ ಬಂಡವಾಳ 1008.97 ಕೋಟಿ ರು. (ಶೇ.21.52 ವೃದ್ಧಿ) ಮತ್ತು ಷೇರು ಬಂಡವಾಳ 34.08 ಕೋಟಿ ರು. ಆಗಿದೆ. ಒಟ್ಟು ಎನ್‌ಪಿಎ ಪ್ರೊವಿಷನ್ ಕವರೆಜ್ ಅನುಪಾತ ಶೇ.68.87 ಆಗಿದೆ. ಬ್ಯಾಂಕಿನ ಸಿಆರ್‌ಎಆರ್ ಮಾರ್ಚ್ 31ರ ವೇಳೆಗೆ ಶೇ.17 ಆಗಿದ್ದು, ನಿಗದಿಪಡಿಸಿದ ಶೇ.12ರ ಮಾನದಂಡಕ್ಕಿಂತ ಹೆಚ್ಚಾಗಿದೆ ಎಂದು ಅನಿಲ್‌ ಲೋಬೊ ವಿವರ ನೀಡಿದರು.

ಬ್ಯಾಂಕ್‌ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ, ನಿರ್ದೇಶಕರಾದ ಆಂಡ್ರೂ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಅನಿಲ್ ಪತ್ರಾವೊ, ಜೆ.ಪಿ. ರೊಡ್ರಿಗಸ್, ಡೇವಿಡ್ ಡಿಸೋಜ, ಎಲ್ರೊಯ್ ಕಿರಣ್ ಕ್ರಾಸ್ಟೊ, ಹೆರಾಲ್ಡ್ ಮೊಂತೇರೊ, ರೋಶನ್ ಡಿಸೋಜ, ಮೆಲ್ವಿನ್ ವಾಸ್, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಐರಿನ್ ರೆಬೆಲ್ಲೊ, ಡಾ. ಫ್ರೀಡಾ ಡಿಸೋಜ, ಆಲ್ವಿನ್ ಪಿ. ಮೊಂತೆರೊ, ಫೆಲಿಕ್ಸ್ ಡಿಕ್ರೂಜ್, ಶರ್ಮಿಳಾ ಮಿನೆಜಸ್ ಹಾಗೂ ಮಹಾ ಪ್ರಬಂಧಕ ಸುನಿಲ್ ಮಿನೆಜಸ್ ಇದ್ದರು.

ಮುಂದಿನ ಯೋಜನೆಗಳು

1. ಜೂನ್ ಅಂತ್ಯದೊಳಗೆ ದೇರಳಕಟ್ಟೆಯಲ್ಲಿ 22ನೇ ಶಾಖೆ ಆರಂಭ.2. ಮಂಗಳೂರು (ಮೋರ್ಗನ್ಸ್‌ಗೇಟ್) ಶಾಖೆ ಜುಲೈ ಅಂತ್ಯದೊಳಗೆ ಸ್ಥಳಾಂತರ.

3. ಆಗಸ್ಟ್ ಮೊದಲ ವಾರದಲ್ಲಿ ಕಟಪಾಡಿಯಲ್ಲಿ 23ನೇ ಶಾಖೆ ಆರಂಭ.

4. ಕಾರ್ಕಳ ಶಾಖೆ ಆಗಸ್ಟ್ ಅಂತ್ಯದೊಳಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರ.

5. ಮೂಡುಬಿದಿರೆ ಶಾಖೆ ಆಗಸ್ಟ್ ಅಂತ್ಯದೊಳಗೆ ನೆಲ ಮಹಡಿಗೆ ಸ್ಥಳಾಂತರ.

6. ಮಾರ್ಚ್ ಅಂತ್ಯದೊಳಗೆ ವಾಮಂಜೂರಿನಲ್ಲಿ 24ನೇ ಶಾಖೆ ಆರಂಭ.

7. ಮಾರ್ಚ್ ಅಂತ್ಯದೊಳಗೆ ಮಂಗಳೂರಿನಲ್ಲಿ ಸಿಲ್ವರ್ ಶಾಖೆ (25ನೇ) ಆರಂಭ.8. ಮೂರು ನಗದು ಠೇವಣಿ ಮತ್ತು ವಿತರಣೆ ಎಟಿಎಂ ಯಂತ್ರಗಳ ಸ್ಥಾಪನೆ.