ಸಾರಾಂಶ
ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಭಕ್ತಾದಿಗಳು ಯಾರೂ ಕೂಡ ಪ್ರಾಣಿಬಲಿ ನೀಡಬಾರದು ಎಂದು ಜಿಲ್ಲಾಧಿಕಾರಿ ಜಾನಕಿ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಭಕ್ತಾದಿಗಳು ಯಾರೂ ಕೂಡ ಪ್ರಾಣಿಬಲಿ ನೀಡಬಾರದು ಎಂದು ಜಿಲ್ಲಾಧಿಕಾರಿ ಜಾನಕಿ ಹೇಳಿದರು.ಗುಳೇದಗುಡ್ಡ ತಾಲೂಕಿನ ಮಂಗಳಗುಡ್ಡದ ಮಂಗಳಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿಯವರು ಹಮ್ಮಿಕೊಂಡಿರುವ ಅಹಿಂಸಾ-ಪ್ರಾಣಿದಯಾ-ಅಧ್ಯಾತ್ಮ ಸಂದೇಶ ಯಾತ್ರೆಗೆ ಬಾಗಲಕೋಟೆ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ಎಸ್ಪಿ ಅಮರನಾಥ್ ರೆಡ್ಡಿಯವರೊಂದಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಾತ್ವಿಕವಾಗಿ ಪೂಜೆ ಸಲ್ಲಿಸಿ ದೇವರ ಆಶೀರ್ವಾದ ಪಡೆಯಬೇಕು ಹಾಗೂ ಕಾನೂನು ಪಾಲಿಸಬೇಕು ಎಂದು ಸೂಚಿಸಿದರು.
ದಯಾನಂದ ಸ್ವಾಮೀಜಿಯವರು ಮಾತನಾಡಿ, ದೇವಾಲಯಗಳು ವಧಾಲಯಗಳಾಗಬಾರದು. ಕಟುಕರ ಕೇರಿಗಳಾಗಬಾರದು, ದಿವ್ಯಾಲಯವಾಗಬೇಕು. ಭಕ್ತಿ, ಜ್ಞಾನ, ನೆಮ್ಮದಿ ಪಡೆಯುವ ಸ್ಥಳವಾಗಿ ದೇವಾಲಯವಿರಬೇಕು ಹಾಗಾಗಿ ಅಹಿಂಸಾತ್ಮವಾಗಿ, ಸಾತ್ವಿಕ ರೀತಿಯಲ್ಲಿ ಪೂಜೆ ಸಲ್ಲಿಸಿ ದೇವರು ಮತ್ತು ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಕೋರಿದರು.ಅಹಿಂಸಾ-ಪ್ರಾಣಿದಯಾ-ಅಧ್ಯಾತ್ಮ ಸಂದೇಶ ಯಾತ್ರೆಯು ಗುಳೇದಗುಡ್ಡ ಮತ್ತು ಮಂಗಳಗುಡ್ಡದ ಸುತ್ತ ಮುತ್ತಲಿನ ಊರುಗಳಲ್ಲಿ ಪ್ರಚಾರ ನಡೆಸಿ ನಂತರ ಮಂಗಳಾದೇವಿ ಜಾತ್ರಾ ಮಹೋತ್ಸವದ ಪರಿಸರದಲ್ಲಿ ಪ್ರಾಣಿ ಬಲಿ ತಡೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.