ಪ್ರಾಣಿ, ಪಕ್ಷಿಗಳು ಪರಿಸರ ಸಮತೋಲನ ಕಾಪಾಡುತ್ತವೆ-ಮಂಜುನಾಥ

| Published : Mar 07 2025, 12:48 AM IST

ಪ್ರಾಣಿ, ಪಕ್ಷಿಗಳು ಪರಿಸರ ಸಮತೋಲನ ಕಾಪಾಡುತ್ತವೆ-ಮಂಜುನಾಥ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸುತ್ತಲಿನ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಾಣಿ, ಪಕ್ಷಿಗಳ ಪಾತ್ರ ಬಹಳ ದೊಡ್ಡದಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದರು.

ನರಗುಂದ: ನಮ್ಮ ಸುತ್ತಲಿನ ಪರಿಸರ ಸಮತೋಲನ ಕಾಪಾಡುವಲ್ಲಿ ಪ್ರಾಣಿ, ಪಕ್ಷಿಗಳ ಪಾತ್ರ ಬಹಳ ದೊಡ್ಡದಿದೆ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ ಹೇಳಿದರು.

ಅವರು ತಾಲೂಕಿನ ಕಣಕಿಕೊಪ್ಪ ಗ್ರಾಮದ ಎನ್.ಸಿ.ಕೆ ಸರಕಾರಿ ಪ್ರೌಢಶಾಲೆ ಮತ್ತು ಹಸಿರು ಶಕ್ತಿ ಇಕೋ ಕ್ಲಬ್ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಜೀವವೈವಿಧ್ಯದ ಮಹತ್ವ ಮತ್ತು ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರಿಸರ ಸಮತೋಲನದಲ್ಲಿ ಮಹತ್ವದ ಪಾತ್ರವಹಿಸುವ ಸೂಕ್ಷ್ಮ ಜೀವಿಗಳಿಂದ ಹಿಡಿದು ಅಗ್ರ ಸ್ತರದ ಪ್ರಾಣಿ ಪಕ್ಷಿಗಳನ್ನು ಗುರುತಿಸುವಿಕೆ ಹಾಗೂ ಪರಿಸರ ಆರೋಗ್ಯವನ್ನು ಕಾಪಾಡುವಲ್ಲಿ ಅವುಗಳ ಪಾತ್ರ ದೊಡ್ಡದಿದೆ. ಆಹಾರ ಉತ್ಪಾದನೆಯಲ್ಲಿ ಕೀಟಗಳು ವಿಶೇಷವಾಗಿ ಜೇನು ಹುಳುಗಳು, ಕಣಜ, ಚಿಟ್ಟೆ, ಪತಂಗಗಳು, ಪಕ್ಷಿಗಳು ಪರಾಗಸ್ಪರ್ಶ ಕ್ರಿಯೆ ನಡೆಸಿ ಹೆಚ್ಚಿನ ಇಳುವರಿ ಉತ್ಪಾದಿಸಲು ಸಹಾಯ ಮಾಡಿ ಮಾನವ ಮತ್ತು ಪ್ರಾಣಿ ಪಕ್ಷಿಗಳಿಗೆ ಅವಶ್ಯವಿರುವ ಆಹಾರವನ್ನು ಉತ್ಪಾದಿಸುವಲ್ಲಿ ಮಹತ್ತರ ಪಾತ್ರವಹಿಸುತ್ತವೆ. ಪ್ರಪಂಚದಲ್ಲಿ ಹೆಚ್ಚಿನ ಬೆಳೆಗಳು ಪರಾಗಸ್ಪರ್ಶ ಕ್ರಿಯೆಗೆ ಜೇನು ಹುಳುಗಳನ್ನು ಅವಲಂಬಿಸಿವೆ. ಜೇನು ಹುಳುಗಳ ಸಂತತಿ ಎಲ್ಲಿಯವರೆಗೆ ಭೂಮಿ ಮೇಲೆ ಸ್ಥಿರವಾಗಿರುತ್ತದೆಯೋ ಅಲ್ಲಿಯವರೆಗೆ ಆಹಾರ ಉತ್ಪಾದನೆಯ ಕೊರತೆ ಉಂಟಾಗುವುದಿಲ್ಲ. ಜೇನು ಹುಳುಗಳ ಸಂತತಿ ನಾಶವಾದರೆ ಆಹಾರ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು.

ವಿಷಕಾರಿ ಮತ್ತು ವಿಷರಹಿತ ಹಾವುಗಳನ್ನು ಗುರುತಿಸುವುದು, ಮೂಢನಂಬಿಕೆಗಳು ಮತ್ತು ಹಾವುಗಳ ರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಮತ್ತು ಹಾವು ಕಚ್ಚಿದಾಗ ಮಾಡಬೇಕಾದ ಪ್ರಥಮ ಚಿಕಿತ್ಸೆಗಳ ಬಗ್ಗೆ, ಪರಿಸರ ಹಾಗೂ ಆಹಾರ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರದ ಕುರಿತು ತಿಳಿಸಿದರು.

ಪರಿಸರ ಸಮತೋಲನದಲ್ಲಿ ಪ್ರತಿಜೀವಿಗಳು ನಿರಂತರ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತವೆ. ಮಾನವ ಹಸ್ತಕ್ಷೇಪದಿಂದಾಗಿ ಇಂದು ಜೀವಿಗಳ ವೈವಿಧ್ಯತೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದ್ದು, ನಾವು ಎಚ್ಚೆತ್ತು ನಡೆದುಕೊಳ್ಳದಿದ್ದರೆ ಮುಂದಿನ ದಿನಮಾನಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ ಎಂದರು. ಈಗಾಗಲೇ ಎಷ್ಟೋಪ್ರಭೇದಗಳು ಭೂಮಿ ಮೇಲಿಂದ ಅಳಿದು ಹೋಗಿದ್ದು, ಪರಿಸರ ಸಮತೋಲನ ಕಾಪಾಡಿಕೊಳ್ಳಲು ಅಳಿವಿನಂಚಿನಲ್ಲಿರುವ ಪ್ರಭೇದಗಳನ್ನು ಸಂರಕ್ಷಿಸಬೇಕಾದ ಅವಶ್ಯಕತೆ ನಮ್ಮ ನಿಮ್ಮಲ್ಲರ ಮೇಲೆ ಇದೆ ಎಂದು ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯ ಐ.ಎನ್. ಹುರಕಡ್ಲಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ತಮ್ಮ ಸುತ್ತಲಿನ ಜೀವವೈವಿಧ್ಯತೆಯ ಅರಿವು ಇರಬೇಕು ಎಂದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಎಸ್.ಜಿ. ಕಡಿವಾಲ, ಬಿ.ಎಚ್. ಲಕ್ಕಲಕಟ್ಟಿ, ಎಸ್‌.ಎಲ್. ಮರಿಗೌಡರ, ಎಸ್‌.ಎಸ್ ದೊಡ್ಡಮನಿ, ಎಸ್. ಪಿ. ಹಿರೇಮನಿ, ಎಲ್ಲ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.