ಸಂತೋಷ ದೈವಜ್ಞ

ಮುಂಡಗೋಡ: ಉರಿ ಬಿಸಿಲಿನಿಂದ ಅರಣ್ಯ ಪ್ರದೇಶದ ಜಲಾಶಯ, ಕೆರೆ, ಹಳ್ಳ ಗುಂಡಿಗಳೆಲ್ಲ ಬತ್ತಿ ಹೋಗಿದ್ದು, ಕಾಡುಪ್ರಾಣಿಗಳು ನೀರಿನ ದಾಹ ತೀರಿಸಿಕೊಳ್ಳಲು ನಾಡಿಗೆ ಬಂದು ಪ್ರಾಣ ಬಿಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದು ಪರಿಸರಪ್ರಿಯರ ಕಳವಳ ಹೆಚ್ಚಿಸಿದೆ.

ತಾಲೂಕಿನ ಬಹುತೇಕ ಭಾಗ ಅರಣ್ಯದಿಂದ ಕೂಡಿದ್ದು, ಇಲ್ಲಿ ಜಿಂಕೆ, ಸಾರಂಗಗಳು, ಕರಡಿ, ಕಾಡುಹಂದಿ, ನರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ವನ್ಯಜೀವಿಗಳು ವಾಸಿಸುತ್ತವೆ. ಈ ಹಿಂದೆ ಕಾಡುಗಳ್ಳ ಬೇಟೆಗಾರರ ಕೈಗೆ ಸಿಕ್ಕು ಮಾತ್ರ ಬಲಿಯಾಗುತ್ತಿದ್ದ ಪ್ರಾಣಿಗಳೀಗ ನೀರಿನ ದಾಹ ತಣಿಸಿಕೊಳ್ಳಲು ನಾಡಿಗೆ ಬಂದು ತಾವೇ ಪ್ರಾಣ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ.

ತಾಪಮಾನ ಹೆಚ್ಚಿದ್ದರಿಂದ ಅರಣ್ಯ ಪ್ರದೇಶದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳಗಳು ನೀರಿಲ್ಲದೆ ಬರಡು ಗುಂಡಿಯಂತಾಗಿದೆ. ದಾಹ ತಣಿಸಿಕೊಳ್ಳಲು ಕಾಡು ಪ್ರಾಣಿಗಳೆಲ್ಲ ಕಾಡಿನಿಂದ ನಾಡಿನತ್ತ ಲಗ್ಗೆ ಇಟ್ಟು ಪ್ರಾಣ ಬಿಡುತ್ತಿವೆ. ಇನ್ನುಳಿದ ದಿನಗಳಲ್ಲಿ ಹಸಿರಿನಿಂದ ಕಂಗೊಳಿಸುವ ಕಾಡು ಈಗ ಬಣ ಬಣ ಎನ್ನುತ್ತಿವೆ. ಕಾಡುಪ್ರಾಣಿಗಳಿಗೆ ನೆರಳು ಇಲ್ಲದಂತಾಗಿದೆ. ಬಿಸಿಲಿನ ಕಾವಿನಿಂದ ಕಂಗೆಟ್ಟು ಹೋಗಿರುವ ಪ್ರಾಣಿಗಳು ನೀರು-ನೆರಳು ಇರುವ ಜಾಗ ಅರಸಿ ಹೋಗುತ್ತವೆ. ಕೆಲವೊಮ್ಮೆ ರಸ್ತೆ ದಾಟುವ ಧಾವಂತದಲ್ಲಿ ವಾಹನಗಳಿಗೆ ಸಿಲುಕಿ ಸಾಯುತ್ತಿವೆ. ಇನ್ನೊಂದೆಡೆ ನಾಡಿಗೆ ಬಂದ ಪ್ರಾಣಿಗಳನ್ನು ಬೀದಿನಾಯಿಗಳು ಬೆನ್ನಟ್ಟಿ ಕಚ್ಚಿ ಗಾಯಗೊಳಿಸುತ್ತವೆ. ಇದರಿಂದ ಜಿಂಕೆಗಳು ಹೃದಯಾಘಾತಗೊಂಡು ಪ್ರಾಣ ಬಿಡುತ್ತವೆ. ಪ್ರಸಕ್ತ ಸಾಲಿನಲ್ಲಿ ಇದುವರೆಗೂ ಸಾಕಷ್ಟು ಕಡೆ ಜಿಂಕೆ, ಸಾರಂಗಗಳು ಪ್ರಾಣ ಬಿಟ್ಟಿವೆ.

ಆತಂಕ


ಬೇಸಿಗೆ ಪ್ರಾರಂಭವಾದಾಗಿನಿಂದ ತಾಲೂಕಿನ ಬಹುತೇಕ ಭಾಗದ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆಗೆ ಸಾಕಷ್ಟು ಪ್ರಮಾಣದ ಅರಣ್ಯ ನಾಶವಾಗಿದೆ. ಆಗಾಗ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವುದರಿಂದ ಭಯಭೀತಗೊಳ್ಳುವ ಕಾಡುಪ್ರಾಣಿಗಳು ದಿಕ್ಕಾಪಾಲಾಗಿ ಓಡುತ್ತವೆ. ಕೆಲವು ನಾಡಿನೆಡೆಗೆ ಮುಖ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿವೆ.

ಮುಂಜಾಗ್ರತಾ ಕ್ರಮದ ಕೊರತೆ

ಕೆರೆ-ಕಟ್ಟೆಗಳೆಲ್ಲ ಬತ್ತಿ ಹೋಗಿದ್ದು, ವನ್ಯಜೀವಿಗಳ ರಕ್ಷಣೆ ದೃಷ್ಟಿಯಿಂದ ಅರಣ್ಯ ಪ್ರದೇಶಗಳಲ್ಲಿ ಪ್ರಾಣಿಗಳಿಗೆ ಕುಡಿಯಲು ಸಮರ್ಪಕ ನೀರಿನ ವ್ಯವಸ್ಥೆಗಾಗಿ ಬೋರ್‌ವೆಲ್ ಅಥವಾ ಗುಂಡಿಗಳನ್ನು ತೆಗೆಸಿ ನೀರು ತುಂಬಿಸುವ ಕೆಲಸವಾಗಬೇಕಿದೆ. ದನ-ಕರುಗಳ (ಜಾನುವಾರುಗಳ) ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಕುಡಿಯಲು ನೀರು ಸಿಗದೇ ಜಾನುವಾರುಗಳು ಕೂಡ ಪರದಾಡುತ್ತಿವೆ. ಅಲ್ಲದೇ ತಾಪಮಾನದಿಂದ ಎಲ್ಲಿಯೂ ಹಸಿರು ಹುಲ್ಲು ಎಂಬುವುದೇ ಇಲ್ಲದಂತಾಗಿದ್ದು, ಈ ಬಗ್ಗೆ ಕೂಡ ಸ್ಥಳೀಯ ಸಂಸ್ಥೆ ಅಧಿಕಾರಿಗಳು ಗಮನಹರಿಸಬೇಕಿದೆ.

ತೀವ್ರವಾದ ಬಿಸಿಲಿನಿಂದ ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳಿಗೆ ಕುಡಿಯಲು ಕಿಂಚಿತ್ತೂ ನೀರಿಲ್ಲಂತಾಗಿರುವುದೇ ಪ್ರಾಣಿಗಳು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ. ವನ್ಯಜೀವಿ ಸಂರಕ್ಷಣೆಗಾಗಿ ಸರ್ಕಾರಗಳು ಕೋಟ್ಯಂತರ ರುಪಾಯಿ ವ್ಯಯಿಸುತ್ತವೆ. ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಅರಣ್ಯ ಪ್ರದೇಶದಲ್ಲಿ ಅಗತ್ಯ ಬೋರ್‌ವೆಲ್ ಕೊರೆಸಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಶೇಟ್ ಆಗ್ರಹಿಸಿದ್ದಾರೆ.