ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ

| Published : May 21 2024, 12:44 AM IST

ಅಂಜಲಿ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಅಂಜಲಿ ಹತ್ಯೆಯಿಂದ ಅವರ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಲಾಯಿತು.

ಅಂಕೋಲಾ: ಹುಬ್ಬಳ್ಳಿಯ ಅಂಜಲಿ ಮೋಹನ ಅಂಬಿಗೇರ ಅವರನ್ನು ಹತ್ಯೆ ಮಾಡಿದ ಆರೋಪಿ ಗಿರೀಶ ಸಾವಂತನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಣಗೀಲ ಮೀನುಗಾರ ಸಹಕಾರಿ ಸಂಘ ಮತ್ತು ಉಕ ಜಿಲ್ಲಾ ಮೀನು ಮಾರಾಟ ಫೆಡರೇಷನ್ ನೇತೃತ್ವದಲ್ಲಿ ತಹಸೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಣಗೀಲ ಮೀನುಗಾರ ಸಹಕಾರಿ ಸಂಘದ ಅದ್ಯಕ್ಷ ರಾಜು ಹರಿಕಂತ್ರ ಮಾತನಾಡಿ, ಅಂಜಲಿಗೆ ಕೊಲೆ ಆರೋಪಿ ಕೆಲ ದಿನಗಳ ಹಿಂದೆಯೇ ನನ್ನ ಜತೆಗೆ ಬರದೇ ಹೋದರೆ ನೇಹಾ ಹಿರೇಮಠ ಆದಂತೆಯೇ ನಿನಗೂ ಆಗುತ್ತದೆ ಎಂದು ಬೆದರಿಕೆ ಹಾಕಿದ್ದನಂತೆ. ಈ ವಿಷಯವನ್ನು ಅಂಜಲಿ ಕುಟುಂಬಸ್ಥರಿಗೆ ಹೇಳಿಕೊಂಡಿದ್ದಳು. ಇದರಿಂದ ಹೆದರಿದ ಆಕೆಯ ಅಜ್ಜಿ ಹಾಗೂ ಸಹೋದರಿ ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಹಾಗೇನು ಆಗಲ್ಲ ಎಂದು ಸಬೂಬು ಹೇಳಿ ಕಳುಹಿಸಿದ್ದರು. ಪೊಲೀಸರು ಸಬೂಬು ಹೇಳದೆ, ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಂಡಿದ್ದರೆ ಈ ರೀತಿಯ ಕೊಲೆ ಆಗುತ್ತಿರಲಿಲ್ಲ. ಇದು ಸಹ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊಲೆಯಾಗಿದೆ. ಇದು ಅತ್ಯಂತ ಖಂಡನೀಯವಾಗಿದೆ ಎಂದರು.

ಅಂಜಲಿ ಹತ್ಯೆಯಿಂದ ಅವರ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆರೋಪಿಗೆ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಮತ್ತು ಸರ್ಕಾರ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದರ ಜತೆಗೆ ಅವಳ ಸಹೋದರಿಗೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್‌ ಅನಂತ ಶಂಕರ ಮನವಿಯನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅರವಿಂದ ಎನ್. ಕುಡ್ತಳಕರ, ಕಪಿಲಜಿ ತಾಂಡೇಲ, ಉದಯಕುಮಾರ ನಾಯ್ಕ, ಶ್ರೀರಾಮ ದುರ್ಗೇಕರ, ಅರವಿಂದ ಎನ್. ಹರಿಕಾಂತ, ವಿನೋದ ವಿ. ಹರಿಕಾಂತ, ಮಂಜುನಾಥ ವಿ. ನಾಯ್ಕ, ಪ್ರಕಾಶ ನಾಯ್ಕ, ಗೋವಿಂದ ಧುರಿ, ಸತೀಶ ನಾಯ್ಕ ಸೇರಿದಂತೆ ಇತರರು ಇದ್ದರು.