ಅಂಜಲಿ ಹಂತಕ ಎಂಟು ದಿನ ಸಿಐಡಿ ಕಸ್ಟಡಿಗೆ

| Published : May 24 2024, 12:53 AM IST / Updated: May 24 2024, 02:08 PM IST

ಸಾರಾಂಶ

ಅಂಜಲಿ ಅಂಬಿಗೇರ್‌ ಕೊಲೆ ಮಾಡಿ ಓಡಿ ಹೋಗುತ್ತಿದ್ದ ಸೆರೆಯಾಗಿರುವ ಸಿಸಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಸಿಐಡಿ ತಂಡ ವಶಪಡಿಸಿಕೊಂಡಿದೆ. ಜತೆಗೆ ಅಕ್ಕಪಕ್ಕದವರಿಂದ ಮಾಹಿತಿ ಕಲೆಹಾಕಿದೆ.

ಹುಬ್ಬಳ್ಳಿ:  ಅಂಜಲಿ ಅಂಬಿಗೇರ ಕೊಲೆ ಆರೋಪಿ ವಿಶ್ವನಾಥ ಅಲಿಯಾಸ್‌ ಗಿರೀಶ ಸಾವಂತ್‌ನನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಒಂದನೇ ಹೆಚ್ಚುವರಿ ದಿವಾಣಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ಗುರುವಾರ ಮಧ್ಯಾಹ್ನ ಆರೋಪಿ ಗಿರೀಶನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು 15 ದಿನ ಕಸ್ಟಡಿಗೆ ಕೇಳಿದ್ದರು.‌ ಸಿಐಡಿ ಅಧಿಕಾರಿಗಳ ಮನವಿ ಪರಿಶೀಲಿಸಿದ ನ್ಯಾಯಾಧೀಶರಾದ ನಾಗೇಶ ನಾಯ್ಕ್ 8 ದಿನ ಕಸ್ಟಡಿಯ ಆದೇಶ ನೀಡಿದ್ದಾರೆ. ನ್ಯಾಯಾಲಯದ ಆದೇಶದ ಬಳಿಕ ಸಿಐಡಿ ಆತನನ್ನು ಇಲ್ಲಿನ ಪ್ರವಾಸಿ ಮಂದಿರಕ್ಕೆ ಕರೆದುಕೊಂಡು ಬಂದು ವಿಚಾರಣೆ ಮುಂದುವರಿಸಿದೆ.

ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಆರೋಪಿಯು ತನ್ನದು ತಪ್ಪಾಯಿತು ಎಂದು ನ್ಯಾಯಾಧೀಶರ ಎದುರಿಗೆ ಕಣ್ಣೀರು ಹಾಕಿದ್ದಾನೆಂದು ಮೂಲಗಳು ತಿಳಿಸಿವೆ.

ಸಂಜೆ ವೇಳೆ ಅಂಜಲಿ ಅಂಬಿಗೇರ್‌ ಕೊಲೆ ಮಾಡಿ ಓಡಿ ಹೋಗುತ್ತಿದ್ದ ಸೆರೆಯಾಗಿರುವ ಸಿಸಿ ಕ್ಯಾಮೆರಾದಲ್ಲಿನ ದೃಶ್ಯಾವಳಿಗಳನ್ನು ಸಿಐಡಿ ತಂಡ ವಶಪಡಿಸಿಕೊಂಡಿದೆ. ಜತೆಗೆ ಅಕ್ಕಪಕ್ಕದವರಿಂದ ಮಾಹಿತಿ ಕಲೆಹಾಕಿದೆ ಎಂದು ಹೇಳಲಾಗಿದೆ.

ಈತನನ್ನು ಮೈಸೂರಿಗೆ ಕರೆದುಕೊಂಡು ಹೋಗಿ ಅಲ್ಲಿ ಈತ ಕೆಲಸ ಮಾಡುತ್ತಿದ್ದ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ ಹಾಗೂ ಕೊಲೆ ಮಾಡಿದ ಬಳಿಕ ಮೈಸೂರಿಗೆ ತೆರಳಿ ಅಲ್ಲಿಂದ ತಂಗಿದ್ದ ಸ್ಥಳಗಳನ್ನು ಸಿಐಡಿ ಪರಿಶೀಲನೆ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಥವಾ ಶನಿವಾರ ಮೈಸೂರಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಹಿನ್ನೆಲೆ:  ಅಂಜಲಿ ಅಂಬಿಗೇರಳನ್ನು ಮೇ 15ರಂದು ವಿಶ್ವನಾಥ ಮನೆಗೇ ನುಗ್ಗಿ ಕೊಲೆ ಮಾಡಿದ್ದ. ಅಲ್ಲಿಂದ ಮೈಸೂರಿಗೆ ಪರಾರಿಯಾಗಿದ್ದ. ಅಲ್ಲಿಂದ ಮರಳಿ ಬರುವಾಗ ದಾವಣಗೆರೆಯಲ್ಲಿ ರೈಲ್ವೆ ಪೊಲೀಸರಿಗೆ ಸಿಕ್ಕು ಬಿದ್ದಿದ್ದ. ರೈಲಿನಿಂದ ಜಿಗಿದಿದ್ದ ಈತನಿಗೆ ಗಾಯಗಳಾಗಿದ್ದವು. ಕಿಮ್ಸ್‌ನಲ್ಲಿ ದಾಖಲಿಸಲಾಗಿತ್ತು. ಈತ ಆರೋಗ್ಯ ಚೇತರಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಕಿಮ್ಸ್‌ನಿಂದ ಬಿಡುಗಡೆಗೊಳಿಸಲಾಗಿತ್ತು. ಆಗ ಸಿಐಡಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ಗುರುವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.