ಅಂಜಲಿ ಹತ್ಯೆ ಆರೋಪಿ ಕಿಮ್ಸ್‌ನಿಂದ ಬಿಡುಗಡೆ, ಸಿಐಡಿ ವಶಕ್ಕೆ

| Published : May 23 2024, 01:01 AM IST

ಅಂಜಲಿ ಹತ್ಯೆ ಆರೋಪಿ ಕಿಮ್ಸ್‌ನಿಂದ ಬಿಡುಗಡೆ, ಸಿಐಡಿ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಪಿಯ ಆರೋಗ್ಯದಲ್ಲಿ ಚೇತರಿಕೆ ಕಂಡ ಬಗ್ಗೆ ವೈದ್ಯರು ಫಿಟ್ನೆಸ್‌ ವರದಿ ನೀಡಿ ಬುಧವಾರ ಬೆಳಗ್ಗೆ ಬಿಡುಗಡೆಗೊಳಿಸಿದರು. ಈ ಹಿನ್ನೆಲೆಯಲ್ಲಿ ಸಿಐಡಿ ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಆತನನ್ನು ವಶಕ್ಕೆ ಪಡೆದಿದೆ.

ಹುಬ್ಬಳ್ಳಿ:

ಅಂಜಲಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡವು ಚುರುಕುಗೊಳಿಸಿದೆ. ಬುಧವಾರ ಎರಡು ತಂಡಗಳಲ್ಲಿ ಪ್ರಕರಣದ ತನಿಖೆ ನಡೆಸಿದ್ದು, ಒಂದು ತಂಡ ಕಿಮ್ಸ್‌ನಲ್ಲಿರುವ ಆರೋಪಿ ವಿಶ್ವನಾಥ ಅಲಿಯಾಸ್‌ ಗಿರೀಶ್‌ ಸಾವಂತನನ್ನು ವಶಕ್ಕೆ ಪಡೆದು ಸುದೀರ್ಘ ವಿಚಾರಣೆಗೆ ಒಳಪಡಿಸಿದರೆ, ಇನ್ನೊಂದು ತಂಡ ವೀರಾಪೂರ ಓಣಿಯಲ್ಲಿರುವ ಅಂಜಲಿ ನಿವಾಸಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿತು.

ದಾವಣಗೆರೆಯಲ್ಲಿ ಮೇ 15ರಂದು ತಡರಾತ್ರಿ ಬಂಧನವಾಗಿದ್ದ ಆರೋಪಿ ಗಿರೀಶ ಸಾವಂತನ ತಲೆ-ಮುಖಕ್ಕೆ ತೀವ್ರ ತರ ಗಾಯಗೊಂಡ ಹಿನ್ನೆಲೆಯಲ್ಲಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆರೋಪಿಯ ಆರೋಗ್ಯದಲ್ಲಿ ಚೇತರಿಕೆ ಕಂಡ ಬಗ್ಗೆ ವೈದ್ಯರು ಫಿಟ್ನೆಸ್‌ ವರದಿ ನೀಡಿ ಬುಧವಾರ ಬೆಳಗ್ಗೆ ಬಿಡುಗಡೆಗೊಳಿಸಿದರು. ಈ ಹಿನ್ನೆಲೆಯಲ್ಲಿ ಸಿಐಡಿ ಎಸ್‌ಪಿ ವೆಂಕಟೇಶ ನೇತೃತ್ವದ ತಂಡ ಆತನನ್ನು ವಶಕ್ಕೆ ಪಡೆದಿದೆ. ಈ ವೇಳೆ ಡಿಸಿಪಿ ರವೀಶ ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಸಾಥ್‌ ನೀಡಿದರು.

ಇದಕ್ಕೂ ಪೂರ್ವದಲ್ಲಿ ವೈದ್ಯರೊಂದಿಗೆ ಚರ್ಚಿಸಿದ ಸಿಐಡಿ ಅಧಿಕಾರಿಗಳ ತಂಡ ಆತನ ಆರೋಗ್ಯ ಹಾಗೂ ಆಸ್ಪತ್ರೆಯಲ್ಲಿನ ಆತನ ವರ್ತನೆ ಬಗ್ಗೆ ಪೂರಕ ಮಾಹಿತಿ ಪಡೆಯಿತು. ಬಳಿಕ ಬೆಂಡಿಗೇರಿ ಪೊಲೀಸ್‌ ಠಾಣೆಗೆ ಕರೆದೊಯ್ದು ಮಧ್ಯಾಹ್ನ 1.30ರಿಂದ ರಾತ್ರಿ 9ರ ವರೆಗೆ ವಿಚಾರಣೆ ನಡೆಸಿತು. ಈ ನಡುವೆ ವಿಶ್ವ ಹಾಗೂ ಆತನ ತಾಯಿ ಸವಿತಾ ಸಾವಂತ ಅವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದರು. ಈ ವೇಳೆ ಆರೋಪಿಯು ಅಂಜಲಿ ಮೈಸೂರಿಗೆ ಬರಲು ಹಾಗೂ ಪ್ರೀತಿ ನಿರಾಕರಿಸಿದ ಕಾರಣ ಕೊಲೆ ಮಾಡಿರುವ ಬಗ್ಗೆ ಬಾಯಿಬಿಟ್ಟಿದ್ದಾನೆ. ಕೊಲೆಯ ಹಿಂದಿನ ದಿನ ಅಂಜಲಿ ಫೋನ್‌ ಪೇಗೆ ₹ 1000 ಕೂಡ ಹಾಕಿದ್ದೆ ಎಂದು ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಸಿಐಡಿಯ ಇನ್ನೊಂದು ತಂಡ ಇಲ್ಲಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿ ನೀಡಿ ಅವಳ ಅಜ್ಜಿ ಗಂಗಮ್ಮ ಹಾಗೂ ಅಂಜಲಿಯ ಸಹೋದರಿಯರ ಹೇಳಿಕೆ ಪಡೆಯಿತು. ಈ ವೇಳೆ ಅಂಜಲಿ ಅಜ್ಜಿ ಮತ್ತು ಸಹೋದರಿಯರು ಮೇ 14ರಂದು ಬೆಳಗಿನ ಜಾವ ನಡೆದ ಅಂಜಲಿ ಹತ್ಯೆ ಕುರಿತು ಸಂಪೂರ್ಣ ಮಾಹಿತಿ ನೀಡಿದರು ಎನ್ನಲಾಗಿದೆ.

ಮಾಹಿತಿ ನೀಡಿದ ಕಮಿಷನರ್‌:

ಹತ್ಯೆ ಪ್ರಕರಣದ ತನಿಖೆಗೆ ಮಂಗಳವಾರವೇ ಹುಬ್ಬಳ್ಳಿಗೆ ಬಂದಿದ್ದ ಸಿಐಡಿ ತಂಡ ಇಲ್ಲಿಯ ಬೆಂಡಿಗೇರಿ ಪೊಲೀಸ್‌ ಠಾಣೆಗೆ ಭೇಟಿ ನೀಡಿ ಪ್ರಕರಣದ ಕುರಿತು ಪೊಲೀಸರಿಂದ ತಡರಾತ್ರಿ ವರೆಗೂ ಮಾಹಿತಿ ಸಂಗ್ರಹಿಸಿದೆ. ಬೆಂಡಿಗೇರಿ ಪೊಲೀಸರು ಈ ವರೆಗೂ ಕೈಗೊಂಡ ತನಿಖೆ ವಿವರಗಳ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಬುಧವಾರ ಬೆಳಗ್ಗೆ ನವನಗರದಲ್ಲಿರುವ ಹು-ಧಾ ಪೊಲೀಸ್‌ ಕಮಿಷನರ್‌ ಕಚೇರಿಗೆ ಭೇಟಿ ನೀಡಿ ಕಮಿಷನರ್‌ ರೇಣುಕಾ ಸುಕುಮಾರ ಅವರೊಂದಿಗೆ ಪ್ರಕರಣದ ಕುರಿತು ಚರ್ಚೆ ನಡೆಸಿದರು. ಆ ಮೂಲಕ ಸಿಐಡಿ ಅಧಿಕಾರಿಗಳು ಅಂಜಲಿ ಪ್ರಕರಣದ ಜತೆಗೆ ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ, ಅಧಿಕಾರಿಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.ಬಾಕ್ಸ್‌.

ಕಿಮ್ಸ್‌ನಲ್ಲಿಯೂ ವಿಶ್ವನಾಥನ ಕಿರಿಕ್‌

ಆರೋಪಿ ವಿಶ್ವನಾಥ ಸಾವಂತ ನಗರದ ಕಿಮ್ಸ್‌ನ ಬಂಧಿಯ ಕೊಠಡಿಯಲ್ಲಿ ಕಳೆದ ಐದು ದಿನದಿಂದ ಚಿಕಿತ್ಸೆ ಪಡೆಯುತ್ತಿದ್ದನು. ಮಂಗಳವಾರ ಈ ಕೊಠಡಿ ಸ್ವಚ್ಛತಾ ಕಾರ್ಯಕ್ಕೆ ಹೋದ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿ ಹುಚ್ಚಾಟ ಮೆರೆದಿದ್ದಾನೆ. ಈ ಹಿನ್ನೆಲೆಯಲ್ಲಿ ಬಂಧಿಯ ಕೊಠಡಿಗೆ ಪೊಲೀಸ್‌ ಇಲಾಖೆ ಹೆಚ್ಚಿನ ಭದ್ರತೆಗೆ 8 ಜನ ಸಿಬ್ಬಂದಿ ಸಹ ನಿಯೋಜಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.ನಾಳೆ ನ್ಯಾಯಾಂಗ ಬಂಧನ?

ಸಿಐಡಿ ತಂಡ ತಡರಾತ್ರಿ ವರೆಗೂ ವಿಚಾರಣೆ ಮತ್ತು ಹೇಳಿಕೆಗಳ ದಾಖಲು ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಗುರುವಾರ ಮಧ್ಯಾಹ್ನದ ಹೊತ್ತಿಗೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸುವ ಸಾಧ್ಯತೆ ಇದೆ. ನಂತರ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಹೆಚ್ಚಿನ ತನಿಖೆಗೆ ಆರೋಪಿಯನ್ನು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.