ಅಂಜಲಿ ನಿಂಬಾಳ್ಕರ್ ಕಾಂಗ್ರೆಸ್ ಅಭ್ಯರ್ಥಿ

| Published : Mar 22 2024, 01:05 AM IST

ಸಾರಾಂಶ

ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಪತ್ನಿಯಾಗಿರುವ ಇವರು ಮೂಲತಃ ವೈದ್ಯೆ.

ಕಾರವಾರ: ಉತ್ತರ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಖಾನಾಪುರ ಕ್ಷೇತ್ರದ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದೆ. ಕ್ಷೇತ್ರದಲ್ಲಿ ಬಹುಸಂಖ್ಯಾತ ಮರಾಠಾ ಮತಗಳ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಮರಾಠಾ ಸಮಾಜಕ್ಕೆ ಮಣೆ ಹಾಕಿದೆ.

ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳ್ಕರ್ ಪತ್ನಿಯಾಗಿರುವ ಇವರು ಮೂಲತಃ ವೈದ್ಯೆ. ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭೆ ಕ್ಷೇತ್ರದಲ್ಲಿ ಒಮ್ಮೆ ಗೆಲುವು ಸಾಧಿಸಿದ್ದ ಇವರು 2023ರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿದ್ದರು.

ಕಾಂಗ್ರೆಸ್‌ನಲ್ಲಿ ಜಿಲ್ಲೆಯ ಬಹುಸಂಖ್ಯಾಕ ಸಮಾಜದ ಅರಣ್ಯ ಭೂಮಿ ಸಕ್ರಮ ಹೋರಾಟ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ಹಾಗೂ ನ್ಯಾಯವಾದಿ ಜಿ.ಟಿ. ನಾಯ್ಕ ಹೆಸರು ಸಹ ಪ್ರಬಲವಾಗಿ ಕೇಳಿಬರುತ್ತಿತ್ತು. ಆದರೆ ಪಕ್ಷ ಅಂತಿಮವಾಗಿ ಅಂಜಲಿ ನಿಂಬಾಳ್ಕರ್ ಅವರಿಗೆ ಟಿಕೆಟ್ ನೀಡಿದೆ.

ಅಂಜಲಿ ನಿಂಬಾಳ್ಕರ ಹೆಸರು ಕೆಲದಿನಗಳಿಂದ ಕೇಳಿಬರುತ್ತಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯ ಬನವಾಸಿಗೆ ಆಗಮಿಸಿದ್ದಾಗ ಅಂಜಲಿ ನಿಂಬಾಳ್ಕರ್ ಆಗಮಿಸಿದ್ದರಿಂದ ಅಂಜಲಿ ನಿಂಬಾಳ್ಕರ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೀಗ ನಿಜವಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೇ ಅಂಜಲಿ ನಿಂಬಾಳ್ಕರ್ ಇದ್ದರೂ ಉತ್ತರ ಕನ್ನಡ ಜಿಲ್ಲೆಗೆ ಹೊರಗಿನವರು. ಈ ಜಿಲ್ಲೆಯಲ್ಲಿ ಅಷ್ಟೇನೂ ಪರಿಚಿತರಾಗಿಲ್ಲ. ಈಗ ಬಿಜೆಪಿಯ ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ತೀವ್ರವಾಗಿದೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರವಾದ ಹೋರಾಟ ನಡೆಯುವ ಸಾಧ್ಯತೆ ಇದೆ.

ಟಿಕೆಟ್ ನ ಪ್ರಬಲ ಆಕಾಂಕ್ಷಿಯಾದ ರವೀಂದ್ರ ನಾಯ್ಕ ಅವರಿಗೆ ಟಿಕೆಟ್ ಸಿಗಲಿದೆ ಎಂದು ಅರಣ್ಯ ಭೂಮಿ ಹೋರಾಟ ವೇದಿಕೆಯ ಸಾವಿರಾರು ಸದಸ್ಯರು ವಿಶ್ವಾಸ ಹೊಂದಿದ್ದರು. ಟಿಕೆಟ್ ಸಿಗದೆ ಇದ್ದರೆ ಮುಂದಿನ ನಡೆಯ ಬಗ್ಗೆ ಸಭೆ ಸೇರಿ ತೀರ್ಮಾನಿಸುವುದಾಗಿಯೂ ಅವರ ಬೆಂಬಲಿಗರು ಹೇಳುತ್ತಿದ್ದಾರೆ. ಹೀಗಾಗಿ ರವೀಂದ್ರ ನಾಯ್ಕ ಅವರ ಮುಂದಿನ ನಡೆ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅಂಜಲಿಗೆ ಟಿಕೆಟ್ ನೀಡಿದರೆ ಸೋಲು: ವಿಶ್ವ ಗೌಡ

ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕೆ ಇಳಿಸಬಾರದು ಎಂದು ಎನ್‌ಐಸಿಯು ಜಿಲ್ಲಾಧ್ಯಕ್ಷ ವಿಶ್ವ ಗೌಡ ಆಗ್ರಹಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿಲ್ಲ. ಅವರಿಗೆ ಟಿಕೆಟ್ ಕೊಟ್ಟಲ್ಲಿ ಕಾಂಗ್ರೆಸ್ ಸೋಲಬೇಕಾಗುತ್ತದೆ. ಕೇವಲ ಅವರಿಗೆ ಕಿತ್ತೂರು, ಖಾನಾಪುರ ಭಾಗದಲ್ಲಿ ಬೆಂಬಲವಿದೆ. ಅವರು ಬೆಳಗಾವಿ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತರಕನ್ನಡದ ಮುಖಂಡರನ್ನು, ಕಾರ್ಯಕರ್ತರನ್ನು ಅವರು ಸಂಪರ್ಕಿಸಿಲ್ಲ ಎಂದು ದೂರಿದರು.ಬಿಜೆಪಿ ಭದ್ರಕೋಟೆಯಾಗಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಬೇಕು ಎಂದರೆ ಈ ಬಾರಿ ಯೋಗ್ಯ ವ್ಯಕ್ತಿಗೆ ಟಿಕೆಟ್ ನೀಡಬೇಕು. ಜಿಲ್ಲೆಯ ಜನರ ಸಂಕಷ್ಟ ಅರ್ಥ ಮಾಡಿಕೊಂಡು ಸ್ಪಂದಿಸುವ ವ್ಯಕ್ತಿಯನ್ನು ಸ್ಪರ್ಧೆಗೆ ಇಳಿಸಬೇಕು ಎಂದರು.ದಿವಾಕರ ಸಂಪಖಂಡ, ಶಬ್ಬೀರ್ ಅಹ್ಮದ್ ಖಾಜಾ, ಅನಿಲ್ ಕೊಠಾರಿ, ಶ್ರೀಕಾಂತ ಮೊಗೇರ ಇದ್ದರು.