ಸಾರಾಂಶ
ಬ್ಯಾಡಗಿ: ಅಂಜುಮನ್-ಏ-ಇಸ್ಲಾಂ ಹಾಗೂ ವಕ್ಫ್ ಬೋರ್ಡ್ ನಡುವಿನ ಜಟಾಪಟಿ ತಾರಕಕ್ಕೇರಿದ್ದು, ಶನಿವಾರ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎರಡನೇ ದಿನವೂ ಸಹ ಯಾರೊಬ್ಬರೂ ನೋಂದಣಿ ಪಡೆದುಕೊಳ್ಳಲಿಲ್ಲ.ಸದಸ್ಯತ್ವ ಸೇರಿದಂತೆ ಚುನಾವಣಾಧಿಕಾರಿ ನೇಮಕ ವಿಚಾರದಲ್ಲಿ ಎರಡೂ ಸಂಸ್ಥೆಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಸದಸ್ಯತ್ವ ನೋಂದಣಿ ಶುಲ್ಕವನ್ನು ಪ್ರಸ್ತುತ ₹ 260 ಕ್ಕೇರಿಸಿರುವುದನ್ನು ಖಂಡಿಸಿ ಹಾಗೂ ಶುಲ್ಕವನ್ನು 100 ರು.ಗಳಿಗೆ ನಿಗದಿಪಡಿಸುವಂತೆ ಆಗ್ರಹಿಸಿ ಕಳೆದೆರಡು ದಿನದಿಂದ ಅಂಜುಮನ್-ಏ-ಇಸ್ಲಾಂ ಸಮಿತಿ ಸದಸ್ಯರು ಪ್ರತಿಭಟನೆ ಕೈಗೊಂಡಿದ್ದರು.ಅಂಜುಮನ್-ಏ-ಇಸ್ಲಾಂ ಸಂಸ್ಥೆ ಸದಸ್ಯರು ವಕ್ಫ್ ಬೋರ್ಡ್ ಅಧಿಕಾರಿಗಳ ವಿರುದ್ಧ ಠಾಣೆಗೆ ಲಿಖಿತ ದೂರು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅಜೀಜ್ ಬಿಜಾಪುರ ಅಂಜುಮನ್-ಏ-ಇಸ್ಲಾಂ ಸಮಿತಿ ಚುನಾವಣೆಯ ಹೊಣೆ ಹೊತ್ತಿರುವ ವಕ್ಫ್ ಬೋರ್ಡ್ ಅಧಿಕಾರಿಗಳು ತಮ್ಮಿಚ್ಛೆಯಂತೆ ನಡೆದುಕೊಳ್ಳುತ್ತಿದ್ದು, ಯಾವುದೇ ಚರ್ಚೆಗಳನ್ನು ನಡೆಸದೇ ಸದಸ್ಯತ್ವ ಶುಲ್ಕವನ್ನು ₹ 260ಕ್ಕೆ ಹೆಚ್ಚಿಸಿದ್ದಾರೆ ಎಂದು ದೂರಿದರು.ಅಂಜುಮನ್ ಸದಸ್ಯ ಮೆಹಬೂಬ ಅಗಸನಹಳ್ಳಿ ಮಾತನಾಡಿ, ಇಲ್ಲಿಯವರೆಗೂ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರು ಸದಸ್ಯತ್ವ ಪಡೆದುಕೊಳ್ಳಬೇಕಾಗಿತ್ತು. ಆದರೆ ನೋಂದಣಿ ಶುಲ್ಕ ಹೆಚ್ಚಾಗಿದ್ದರಿಂದ ಕೇವಲ 118 ಜನರು ಸದಸ್ಯತ್ವ ಪಡೆದಿದ್ದಾರೆ.
ಇದನ್ನು ಪ್ರಶ್ನಿಸಿದರೆ ವಕ್ಫ್ ಬೋರ್ಡ್ ಸಿಇಒ ಇರುವಷ್ಟು ಸದಸ್ಯರಲ್ಲೇ ಚುನಾವಣೆ ನಡೆಸುವುದಾಗಿ ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ, ವಕ್ಫ್ ಬೋರ್ಡ್ ಅಧಿಕಾರಿಗಳ ವರ್ತನೆಯಿಂದ ಆಂತರಿಕ ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುತ್ತಿದ್ದು ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಅಂಜುಮನ್ ಪತ್ರ: ಮಜೀದ್ ಮುಲ್ಲಾ ಮಾತನಾಡಿ, ಮುಸ್ಲಿಂ ಸಮಾಜದ ಜನರು ಬಹುತೇಕರು ಕೂಲಿ ಕಾರ್ಮಿಕರಿದ್ದು, ಪ್ರಸ್ತುತ ಶುಲ್ಕ ₹ 260 ಹೊರೆಯಾಗುತ್ತಿದೆ. ಜನರ ಅಭಿಪ್ರಾಯ ಪಡೆದು ಸದಸ್ಯತ್ವ ಶುಲ್ಕವನ್ನು ಕೇವಲ ₹100 ಗಳಿಗೆ ಮಿತಿಗೊಳಿಸುವಂತೆ ಅಂಜುಮನ್ ಸಂಸ್ಥೆ ಲಿಖಿತ ಮನವಿ ಮಾಡಿಕೊಂಡಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ಆರೋಪಿಸಿದರು.ಪುರಸಭೆ ಮಾಜಿ ಸದಸ್ಯ ನಜೀರ್ ಅಹ್ಮದ ಶೇಖ್ ಮಾತನಾಡಿ, ತರಾತುರಿಯಲ್ಲಿ ಚುನಾವಣೆ ನಡೆಸುತ್ತಿರುವುದರ ಹಿಂದೆ ಬಹುದೊಡ್ಡ ಷಡ್ಯಂತ್ರ ನಡೆದಿದೆ. ಚುನಾವಣೆ ಮುಕ್ತವಾಗಿ ನಡೆಯುವ ಲಕ್ಷಣಗಳು ಕಾಣುತ್ತಿಲ್ಲ. ನಮ್ಮ ಶಾಸಕ ಬಸವರಾಜ ಶಿವಣ್ಣನವರ ಶುಲ್ಕ ಕಡಿಮೆಗೊಳಿಸುವಂತೆ ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಕಿಡಿಕಾರಿದರು.
ಜಿಲಾನಿ ಶಿರಹಟ್ಟಿ, ಜಾಫರ್‌ಸಾಬ್ ಮುಲ್ಲಾ, ಮೆಹಬೂಬ್ ಮಕಾಂದಾರ್, ಮಂಜೂರ್ ಹಕೀಮ್, ನಿಸ್ಸಾರ ಹಾವನೂರ, ಅಸ್ಲಂ ಮುಲ್ಲಾ, ಸೇರಿದಂತೆ ಇನ್ನಿತರರಿದ್ದರು.
ನಿನ್ನೆ ಕಾರ್ಯನಿರ್ವಹಿಸದ ಕಚೇರಿ: ಅಂಜುಮನ್-ಏ-ಇಸ್ಲಾಂ ಸದಸ್ಯರ ಪ್ರತಿರೋಧದಿಂದ ವಕ್ಫ್ ಬೋರ್ಡ್ ಅಧಿಕಾರಿಗಳು ಶನಿವಾರ ಕೆಲಸ ನಿರ್ವಹಿಸದೇ ಖಾಲಿ ಕೈಯಿಂದ ತೆರಳಿದರು. ಅದಾಗ್ಯೂ ಅಂಜುಮನ್-ಏ-ಇಸ್ಲಾಂ ಹಾಗೂ ವಕ್ಫ್ ಬೋರ್ಡ್ ನಡುವಿನ ಜಟಾಪಟಿ ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ.