ಅಂಜುಮನ್ ಹಾಮಿ ಎ ಮುಸ್ಲೀಮಿನ್ ಶಿಕ್ಷಣ ಸಂಸ್ಥೆಯಿಂದ ಡಿ. 13 ಮತ್ತು 14ರಂದು ಅಂಜುಮನ್ ಡೇ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ.

13,14 ರಂದು ಭಟ್ಕಳ ಅಂಜುಮನ್ ಕಾಲೇಜಿನಲ್ಲಿ ಅಂಜುಮನ್ ಡೇ

ಕನ್ನಡಪ್ರಭ ವಾರ್ತೆ ಭಟ್ಕಳ

ಅಂಜುಮನ್ ಹಾಮಿ ಎ ಮುಸ್ಲೀಮಿನ್ ಶಿಕ್ಷಣ ಸಂಸ್ಥೆಯಿಂದ ಡಿ. 13 ಮತ್ತು 14ರಂದು ಅಂಜುಮನ್ ಡೇ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಯುನೂಸ್ ಕಾಝೀಯಾ ಹೇಳಿದರು.

ಅಂಜುಮನ್ ಆಡಳಿತ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

13ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಫರೀದ್, ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ, ಕರ್ನಾಟಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎ.ಎಂ. ಖಾನ್, ಬೀದರಿನ ಶಾಹೀನ್ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ಡಾ. ಅಬ್ದುಲ್ ಖಾದೀರ್ ಪಾಲ್ಗೊಳ್ಳಲಿದ್ದು, ಅಧ್ಯಕ್ಷತೆಯನ್ನು ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಯುನೂಸ್ ಖಾಜೀಯಾ ವಹಿಸಲಿದ್ದಾರೆ. ಸಂಜೆ 4.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಡಿ. 14ರಂದು ಮಹಿಳೆಯರಿಗಾಗಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಹಾಯಕ ಆಯುಕ್ತೆ ಕಾವ್ಯ ರಾಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶ್ವಿನಿಕುಮಾರ್, ಭಟ್ಕಳ ಅರ್ಬನ್ ಬ್ಯಾಂಕಿನ ನಿರ್ದೇಶಕಿ ಬೀನಾ ವೈದ್ಯ ಪಾಲ್ಗೊಳ್ಳಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಜುಮನ್ ಸಂಸ್ಥೆಯ ಮಹಿಳಾ ಸಲಹಾ ಸಮಿತಿ ಅಧ್ಯಕ್ಷೆ ಸೀಮಾ ಅಬುಬಕ್ಕರ್ ಕಾಸೀಮಜಿ ವಹಿಸಲಿದ್ದಾರೆ ಎಂದರು.

ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಅಂಜುಮನ್ ಸಂಸ್ಥೆಯಿಂದ ಶೀಘ್ರದಲ್ಲಿ ಪ್ಯಾರಾಮೆಡಿಕಲ್ ಕಾಲೇಜು ಆರಂಭಿಸಲಾಗುವುದು. ಸ್ಥಳೀಯ ಆಸ್ಪತ್ರೆಗಳಲ್ಲಿ ಲ್ಯಾಬ್ ಮತ್ತಿತರ ಕೆಲಸಗಳಿಗೆ ಹೊರಗಿನವರೇ ಹೆಚ್ಚು ಇರುವುದರಿಂದ ಸ್ಥಳೀಯರಿಗೆ ಉದ್ಯೋಗಕ್ಕೆ ಅನುಕೂಲವಾಗಲು ಅಂಜುಮನ್ ಸಂಸ್ಥೆಯಿಂದ ಬರುವ ವರ್ಷದಲ್ಲಿ ಪ್ಯಾರಾಮೆಡಿಕಲ್ ಆರಂಭಿಸಲಾಗುವುದು. ಇದಕ್ಕಾಗಿ ದಾಖಲೆ ಪತ್ರ, ಕಟ್ಟಡ ಮುಂತಾದ ಕೆಲಸಗಳನ್ನು ನಡೆಯುತ್ತಿದೆ ಎಂದರು.

ಪ್ಯಾರಾ ಮೆಡಿಕಲ್ ಕಾಲೇಜಿನಿಂದ ಕಲಿತವರಿಗೆ ಸ್ಥಳೀಯವಾಗಿ ಉದ್ಯೋಗ ಮಾಡಲು ಅನುಕೂಲವಾಗುವುದು. ನಮ್ಮ ಸಂಸ್ಥೆಯ ಪ್ಯಾರಾ ಮೆಡಿಕಲ್ ಕಾಲೇಜು ಯಶಸ್ವಿಯಾದರೆ ಸಂಸ್ಥೆಯಿಂದ ಮೆಡಿಕಲ್ ಕಾಲೇಜು ಮಾಡುವ ಚಿಂತನೆ ಇದೆ ಎಂದ ಅವರು ಅಂಜುಮನ್ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಅಂಜುಮನ್ ಅಡಿಯಲ್ಲಿ 15 ಶಿಕ್ಷಣ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಂಜುಮನ್ ಸಂಸ್ಥೆ ಶಿಕ್ಷಣಕ್ಕೆ ಯಾವುದೇ ರೀತಿಯ ತಾರತಮ್ಯ ಮಾಡುವುದಿಲ್ಲ. ಇಲ್ಲಿ ಎಲ್ಲ ಜಾತಿ ಜನಾಂಗ ಸಮುದಾಯದವರೂ ಶಿಕ್ಷಣ ಪಡೆಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳಿಗೂ ಸಂಸ್ಥೆ ನೆರವು ನೀಡಿ ಶಿಕ್ಷಣ ಕೊಡುತ್ತಿದೆ ಎಂದರು.

ಈ ಸಂದರ್ಭ ಉಪಾಧ್ಯಕ್ಷ ಸಿದ್ಧೀಕ್ ಫಿಲ್ಲೂರ್, ಪ್ರಧಾನ ಕಾರ್ಯದರ್ಶಿ ಇಶಾಕ ಶಾಬಂದ್ರಿ, ಹಣಕಾಸು ಕಾರ್ಯದರ್ಶಿ ಎಸ್.ಎಂ. ಪರ್ವೇಜ್, ಪ್ರಾಂಶುಪಾಲ ಮೊಹ್ಮದ್ ಮೋಸಿನ್ ಇದ್ದರು.