ಸಾರಾಂಶ
ಅಕ್ಷಯ ತೃತೀಯ ದಿನದಿಂದ ಆರಂಭವಾದ ಬಂಡಿಹಬ್ಬವು ಬುದ್ಧ ಪೌರ್ಣಿಮೆಯ ದಿನದಂದು ರಾಟೆ ಕಂಬವನ್ನೇರುವ ಸಂಪ್ರದಾಯದ ಮೂಲಕ ಬಂಡಿಹಬ್ಬ ಪೂರ್ಣಗೊಂಡಿತು.
ಅಂಕೋಲಾ: 1400 ವರ್ಷಗಳ ಐತಿಹಾಸಿಕ ಮಹತ್ವವಿರುವ ಪಟ್ಟಣದ ಭೂಮ್ತಾಯಿ ಶಾಂತಾದುರ್ಗಾ ದೇವರ ಬಂಡಿಹಬ್ಬ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಗುರುವಾರ ರಾತ್ರಿ ಸಂಭ್ರಮದಿಂದ ಸಂಪನ್ನಗೊಂಡಿತು.
ಅಕ್ಷ ಯ ತೃತೀಯ ದಿನದಿಂದ ಆರಂಭವಾದ ಬಂಡಿಹಬ್ಬವು ಬುದ್ಧ ಪೌರ್ಣಿಮೆಯ ದಿನದಂದು ರಾಟೆ ಕಂಬವನ್ನೇರುವ ಸಂಪ್ರದಾಯದ ಮೂಲಕ ಬಂಡಿಹಬ್ಬ ಪೂರ್ಣಗೊಂಡಿತು.ಕುಂಬಾರಕೇರಿ ಮೂಲ ಕಳಸ ದೇವಸ್ಥಾನದಿಂದ ಉದಯ ಗುನಗಾ ಚಿನ್ನಾಭರಣ ಭೂಷಿತವಾದ ಪುಷ್ಪಾಲಂಕರಿತ ಕಳಸವನ್ನು ನಗರದಲ್ಲಿ ಸಂಚರಿಸಿ ಆಡೊಕಟ್ಟೆಯಲ್ಲಿ ಪ್ರತಿಷ್ಠಾಪಿಸಿದರು. ಕಳಸದ ಜತೆ ಬಿಡಿ ಗುನಗ, ಕಟಗಿದಾರರು ಸೇರಿದಂತೆ ಪಂಚವಾದ್ಯಗಳು ಮೊಳಗಿತು.
ದೇವಿಗೆ ಪ್ರೀಯವಾದ ಮಲ್ಲಿಗೆ, ಅಬ್ಬಲಿ, ಸಂಪಿಗೆ ಹೂವನ್ನು ಭಕ್ತರು ಸಮರ್ಪಿಸಿದರು. ಕಳಸವನ್ನು ಸ್ವಾಗತಿಸಲು ನಗರದ ತುಂಬೆಲ್ಲ ರಂಗೋಲಿ ಹಾಕಿ ತಳಿರು ತೋರಣಗಳಿಂದ ಶೃಂಗರಿಸಿದ್ದರು. ಆಡುಕಟ್ಟೆಯಲ್ಲಿ ದೇವಿಗೆ ಬಲಿದೇವರ ಮಕ್ಕಳ ಆವಾಹನೆ ಪಡೆದು ದೇವಿಯ ಕಳಸವು ಶಾಂತಾದುರ್ಗಾ ದೇವಸ್ಥಾನದ ನೇರದಲ್ಲಿರುವ ಬಂಡಿಕಟ್ಟೆಯಲ್ಲಿ ರಾಟೆಕಂಬವನ್ನೇರಿತು.ಇದನ್ನು ವಿಕ್ಷಿಸಲು ಆಗಮಿಸಿದ ಭಕ್ತ ಸಮೂಹ ಚಪ್ಪಾಳೆ ಹೊಡೆದು ಸಂಭ್ರಮಿಸಿದರು. ಈ ಬಂಡಿಹಬ್ಬದ ಸಂದರ್ಭದಲ್ಲಿ ಗೋವಾ, ಮುಂಬೈ, ಬೆಂಗಳೂರು ಹೊರರಾಜ್ಯ ದೇಶಗಳಲ್ಲಿದ್ದ ಅಂಕೋಲಿಗರು ಆಗಮಿಸಿ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದರು.ಜಾತ್ರೆಯ ಸಂದರ್ಭದಲ್ಲಿ ಸಿಪಿಐ ಶ್ರೀಕಾಂತ ತೋಟಗಿ ಪಿಎಸ್ಐ ಉದ್ದಪ್ಪ ಧರೆಪ್ಪನವರ್ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಒದಗಿಸಲಾಗಿತ್ತು.ಮುಗಿಲು ಮುಟ್ಟಿದ ಸಂಭ್ರಮ
ಬಂಡಿ ಹಬ್ಬದ ಸಂದರ್ಭಸಲ್ಲಿ ಮೋಡ ಕವಿದ ವಾತಾವರಣವಿತ್ತು. ಆದರೆ ಕೇವಲ ಪುಷ್ಪ ಮಳೆಯಂತೆ ಹನಿಗಳು ಸಿಂಚನವಾಯಿತೆ ವಿನಾ ಮಳೆ ಮಾತ್ರ ಸುರಿಯದೆ ದೈವ ಆರಾಧನೆಯ ವೇಳೆ ಸಂಭ್ರಮ ಮುಗಿಲು ಮುಟ್ಟಿತು.