ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬೀಸುತ್ತಿರುವ ಬಿರುಗಾಳಿಯ ಪರಿಣಾಮ ವಿದ್ಯುತ್ ಜಾಲಕ್ಕೆ ಭಾರೀ ಹಾನಿಯಾಗಿದೆ.

161 ವಿದ್ಯುತ್ ಕಂಬಗಳು ನೆಲಕ್ಕುರುಳಿ ಗ್ರಾಮಗಳು ಕತ್ತಲಲ್ಲಿ/ ಮರ ನೆಲಕ್ಕುರುಳಿ ಜನಜೀವನ ಅಸ್ತವ್ಯಸ್ತರಾಘು ಕಾಕರಮಠ

ಕನ್ನಡಪ್ರಭ ವಾರ್ತೆ ಅಂಕೋಲಾ

ತಾಲೂಕಿನಲ್ಲಿ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಬೀಸುತ್ತಿರುವ ಬಿರುಗಾಳಿಯ ಪರಿಣಾಮ ವಿದ್ಯುತ್ ಜಾಲಕ್ಕೆ ಭಾರೀ ಹಾನಿಯಾಗಿದೆ. ವಿವಿಧೆಡೆ ಮರಗಳು ಧರೆಗುರುಳಿದ್ದು, 161 ವಿದ್ಯುತ್ ಕಂಬಗಳು ಮುರಿದಿವೆ. ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿದ ಪರಿಣಾಮ ತಾಲೂಕಿನ ಅನೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಅಸ್ತವ್ಯಸ್ತಗೊಂಡಿದ್ದು, ಹೆಸ್ಕಾಂ ಸಿಬ್ಬಂದಿ ಹಗಲು-ರಾತ್ರಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮೊರಳ್ಳಿ ಭಾಗದಲ್ಲಿ ರಸ್ತೆಗೆ ಮರ ಉರುಳಿದ್ದರಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಸ್ಥಳೀಯರು ತಕ್ಷಣ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಬಳಿಕ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮುರಿದ ವಿದ್ಯುತ್ ಕಂಬವನ್ನು ಬದಲಿಸಿ ವಿದ್ಯುತ್ ಪೂರೈಕೆ ಪುನಃಸ್ಥಾಪಿಸಿದರು.

ಆಂದ್ಲೆಯ ತೆನೆಬೋಳೆ ಪ್ರದೇಶದಲ್ಲಿ ವಿದ್ಯುತ್ ಕಂಬದ ಮೇಲೆಯೇ ಮರ ಉರುಳಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ರಾಮಸ್ಥರ ಸಹಕಾರದಿಂದ ಮರ ತೆರವುಗೊಳಿಸಿದ ಬಳಿಕ ಅಪಾಯ ತಪ್ಪಿತು. ತಾಲೂಕಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆ ಮರಗಳು ಉರುಳಿರುವುದರಿಂದ ವ್ಯಾಪಕ ಪ್ರಮಾಣದ ಹಾನಿ ಸಂಭವಿಸಿದೆ.

ವಿದ್ಯುತ್ ಪೂರೈಕೆ ಶೀಘ್ರ ನೀಡಲು ಹೆಸ್ಕಾಂ ಸಿಬ್ಬಂದಿ ನಿರಂತರವಾಗಿ ಶ್ರಮಿಸುತ್ತಿದ್ದು, ಹಲವು ಕಡೆಗಳಲ್ಲಿ ದುರಸ್ತಿ ಕಾರ್ಯ ಮುಂದುವರಿದಿದೆ.85 ಕಿಮೀ ಒಂದೇ ಫೀಡರ್; ಲೈನ್‌ಮನ್‌ಗಳ ಹರಸಾಹಸ

ತಾಲೂಕಿನಲ್ಲಿ ಒಟ್ಟು 16 ಫೀಡರ್‌ಗಳ ಮೂಲಕ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ. ಆದರೆ ಗುಂಡಬಾಳ ಫೀಡರ್ ಒಂದೇ 85 ಕಿಮೀ ಹೆಚ್ಚಿನ ಉದ್ದದ ವಿದ್ಯುತ್ ಮಾರ್ಗವನ್ನು ಹೊಂದಿರುವುದು ಇಲಾಖೆಗೆ ದೊಡ್ಡ ಸವಾಲಾಗಿದೆ.

ಲೈನ್‌ನಲ್ಲಿ ಎಲ್ಲೇ ಸಣ್ಣ ಪ್ರಮಾಣದ ದೋಷ ಉಂಟಾದರೂ ತಳಗದ್ದೆ, ಬೆಳೆಸೆ, ಶಿರೂರು, ತಗತಗೇರಿ, ಕೆಂಕಣಿ, ಶಿವಪುರ, ಆಂದ್ಲೆ, ಕಾರೆಬೈಲ್, ಉಳುವರೆ, ಗುಂಡಬಾಳ, ನೇವಳಸೆ, ಗುಡ್ಡೆ ನೇವಳಸೆ, ಮರಕಾಲ್ ಸೇರಿದಂತೆ ಅನೇಕ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ.

ಕಳೆದ ಮೂರು ದಿನಗಳ ಬಿರುಗಾಳಿ ಹಾಗೂ ಮಳೆಯಿಂದ 161 ವಿದ್ಯುತ್ ಕಂಬಗಳು ಧರೆಗುರುಳಿದ್ದು, ಅವುಗಳನ್ನು ಮರುಸ್ಥಾಪಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವುದು ಲೈನ್‌ಮನ್‌ಗಳಿಗೆ ಹರಸಾಹಸದ ಕೆಲಸವಾಗಿದೆ.

ತಾಲೂಕಿಗೆ ಅಂಕೋಲಾ, ಬಾಳೆಗುಳಿ ಹಾಗೂ ಮಾಸ್ತಿಕಟ್ಟಾ ಗ್ರಿಡ್‌ಗಳಿಂದ ವಿದ್ಯುತ್ ಸರಬರಾಜಾಗುತ್ತಿದೆ. ಹಲವು ವರ್ಷಗಳಿಂದ ಬಳಲೆಯಲ್ಲಿ ಪ್ರತ್ಯೇಕ ಫೀಡರ್ ನಿರ್ಮಿಸುವಂತೆ ಸ್ಥಳೀಯರು ಹಾಗೂ ಅಧಿಕಾರಿಗಳು ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದರೂ ಇನ್ನೂ ಯೋಜನೆ ಜಾರಿಯಾಗಿಲ್ಲ.

ಈ ಹಿನ್ನೆಲೆ ಶೀಘ್ರವೇ ಬಳಲೆಯಲ್ಲಿ ಹೊಸ ಫೀಡರ್ ನಿರ್ಮಿಸದಿದ್ದರೆ ಇಲಾಖೆಯ ವಿರುದ್ಧ ಸಾರ್ವಜನಿಕರು ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.ಗುಡ್ಡಗಾಡು ಪ್ರದೇಶಗಳಲ್ಲಿ ಪಟ್ಟಣಗಳಿಗಿಂತ ಹೆಚ್ಚು ಲೈನ್‌ಮನ್‌ಗಳನ್ನು ನೇಮಿಸಬೇಕು. ಇದೇ ಪ್ರದೇಶಗಳಲ್ಲಿ ಪದೇಪದೆ ವಿದ್ಯುತ್ ಸಮಸ್ಯೆ ಎದುರಾಗುತ್ತಿದೆ. ಹೆಸ್ಕಾಂ ಈ ಕುರಿತು ವಿಶೇಷ ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಕಾರೆಬೈಲ್ ನಿವಾಸಿ ನಮೀತಾ ನಾಯಕ.

ಪ್ರತಿಯೊಬ್ಬ ಗ್ರಾಹಕರಿಗೂ ಶೀಘ್ರ ವಿದ್ಯುತ್ ಪೂರೈಕೆ ಕಲ್ಪಿಸಲು ನಾವು ನಿರಂತರ ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಕೃತಿ ವಿಕೋಪದಂತಹ ಸಂದರ್ಭಗಳಲ್ಲಿ, ಗುಡ್ಡಗಾಡು ಪ್ರದೇಶಗಳಲ್ಲಿರುವ ಎಲ್ಲ ಕಡೆಗೂ ಒಂದೇ ಸಮಯದಲ್ಲಿ ವಿದ್ಯುತ್ ಮರುಸ್ಥಾಪಿಸುವುದು ಸಾಧ್ಯವಾಗುವುದಿಲ್ಲ. ಸಾರ್ವಜನಿಕರ ಸಹಕಾರ ನಮಗೆ ಅತ್ಯಂತ ಅಗತ್ಯವಾಗಿದೆ ಎಂದು ಅಂಕೋಲಾ ಹೆಸ್ಕಾಂ ಉಪ ವಿಭಾಗದ ಎಇಇ ಪ್ರವೀಣ ನಾಯ್ಕ ತಿಳಿಸಿದ್ದಾರೆ.