ಕನ್ನಡಪ್ರಭ ವಾರ್ತೆ, ತುಮಕೂರುತಮ್ಮ ಮಗ ತೆರಿಗೆ ಪಾವತಿದಾರರು ಎಂಬ ಕಾರಣಕ್ಕೆ ಬಿಎಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಪಡಿತರ ಚೀಟಿ ಎಂದು ಪರಿಗಣಿಸಿ ಪಡಿತರ ಚೀಟಿಯನ್ನು ರದ್ದುಪಡಿಸಲಾಗಿದ್ದ ಸಂಬಂಧ ಸೌಲಭ್ಯದಿಂದ ವಂಚಿತರಾಗಿದ್ದ ವೃದ್ಧ ದಂಪತಿಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಮಧ್ಯ ಪ್ರವೇಶದಿಂದ ಪುನರ್ ಪರಿಶೀಲಿಸಿ ಬಿಪಿಎಲ್ ಪಡಿತರ ಚೀಟಿ ನೀಡಿ ಆಹಾರ ಪದಾರ್ಥವನ್ನು ನೀಡಿದ ಘಟನೆ ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆಯಿತು. ಗುಬ್ಬಿ ತಾಲೂಕು ಚೇಳೂರಿನ ಚೆನ್ನಬಸಮ್ಮ ಅವರು ತಮ್ಮ ಪತಿ ಹಾಗೂ ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಇವರ ಒಬ್ಬ ಮಗ ಬ್ಯಾಂಕ್ ಸಾಲ ಪಡೆದ ಕಾರಣ ಆದಾಯ ತೆರಿಗೆ ಪಾವತಿದಾರರೆಂದು ಪರಿಗಣಿಸಿದ ಹಿನ್ನೆಲೆಯಲ್ಲಿ ಈ ಕುಟುಂಬದ ಬಿಪಿಎಲ್ ಪಡಿತರ ಚೀಟಿಯನ್ನು ಎಪಿಎಲ್ ಎಂದು ಪರಿಗಣಿಸಲಾಗಿತ್ತು. ವೃದ್ಧ ತಂದೆ ತಾಯಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಮಗ ಪೋಷಕರ ಯೋಗಕ್ಷೇಮ ನೋಡಿಕೊಳ್ಳುತ್ತಿಲ್ಲ ಹಾಗೂ ಪೋಷಕರಿಗೆ ಯಾವುದೇ ಕೃಷಿ ಭೂಮಿ ಇಲ್ಲದಿರುವ ಬಗ್ಗೆ ಜಿಲ್ಲಾಧಿಕಾರಿಯವರ ಸೂಚನೆಯೊಂದಿಗೆ ಮತ್ತೊಮ್ಮೆ ಆಹಾರ ನಿರೀಕ್ಷಕರು ಸ್ಥಳ ಪರಿಶೀಲನೆ ನಡೆಸಿ, ವರದಿ ನೀಡಿದ ಆಧಾರದ ಮೇಲೆ ಚೇಳೂರಿನ ಚೆನ್ನಬಸಮ್ಮ ರಾಜಣ್ಣ ಇವರ ಪಡಿತರ ಚೀಟಿಯಲ್ಲಿ ಮಗನ ಹೆಸರನ್ನು ಕೈಬಿಟ್ಟು ಪುನಃ ಬಿಪಿಎಲ್ ಕುಟುಂಬ ಎಂದು ಪರಿಗಣಿಸಿ ಆದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಚೆನ್ನಬಸಪ್ಪ ಅವರಿಗೆ ಆದ್ಯತಾ ಪಡಿತರ ಚೀಟಿಯನ್ನು ಪುನರ್ ಸ್ಥಾಪಿಸಿ ಬಿಪಿಎಲ್ ಪಡಿತರ ಚೀಟಿ ವಿತರಣೆ ಮಾಡುವ ಜೊತೆಗೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ವೃದ್ಧ ದಂಪತಿಗೆ ಪಡಿತರ ಅಕ್ಕಿ ವಿತರಿಸಿದರು. ಕಳೆದ 5 ತಿಂಗಳ ಹಿಂದೆ ಆಹಾರ ನಿರೀಕ್ಷಕರು ಬಿಪಿಎಲ್ ಪಡಿತರ ಚೀಟಿದಾರರ ಸ್ಥಳ ಪರಿಶೀಲನೆ ಸಂದರ್ಭದಲ್ಲಿ ವ್ಯಕ್ತವಾದ ಅಂಶದ ಹಿನ್ನೆಲೆಯಲ್ಲಿ ಚೆನ್ನಬಸಮ್ಮ ಅವರ ಪಡಿತರ ಚೀಟಿ ಆದ್ಯತೇತರ ಪಡಿತರ ಚೀಟಿಯೆಂದು ಪರಿಗಣಿಸಲಾಗಿತ್ತು. ಈ ವಿಷಯದ ಬಗ್ಗೆ ಅರ್ಜಿದಾರರು ಗುಬ್ಬಿ ತಾಲೂಕು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿ ವಾಸ್ತವ ಅಂಶವನ್ನು ವಿವರಿಸಿದ್ದರು. ಗುರುವಾರ ಜಿಲ್ಲಾಧಿಕಾರಿ ಕಚೇರಿಗೆ ಪಡಿತರ ಚೀಟಿದಾರರಾದ ಚೆನ್ನಬಸಮ್ಮ ಮತ್ತು ಅವರ ಪತಿ ರಾಜಣ್ಣ ಅವರನ್ನು ಆಹ್ವಾನಿಸಿ ಪರಿಷ್ಕೃತ ಬಿಪಿಎಲ್ ಕಾರ್ಡ್ ಜೊತೆಗೆ ಅಕ್ಕಿಯನ್ನೂ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚೆನ್ನಬಸಮ್ಮ ಅವರು ಕಳೆದ 5 ತಿಂಗಳಿಂದ ಪಡಿತರ ಅಕ್ಕಿ ಇಲ್ಲದೆ ಸಮಸ್ಯೆ ಅನುಭವಿಸಬೇಕಾಯಿತು. ಕೊನೆಗೆ ಅಧಿಕಾರಿಗಳ ಮಧ್ಯ ಪ್ರವೇಶದಿಂದ ಅನುಕೂಲವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕಿ ಸೌಮ್ಯ ಉಪಸ್ಥಿತರಿದ್ದರು.ವೃದ್ಧ ದಂಪತಿ ಮನೆಗೆ ಮರಳಿದ ಅನ್ನಭಾಗ್ಯ
ವೃದ್ಧ ದಂಪತಿ ಮನೆಗೆ ಮರಳಿದ ಅನ್ನಭಾಗ್ಯ
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.