ಬಡವರಿಗೆ ವಿತರಿಸಬೇಕಾದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿ, ನಂತರ ಅಕ್ಕಿಗೆ ಪಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಮಾರಲಾಗುತ್ತಿತ್ತು.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿ ಮತ್ತು ರಾಗಿಯನ್ನು ಇಲ್ಲಿನ ಆಹಾರ ಇಲಾಖೆಯ ಶಿರಸ್ತೇದಾರರಾದ ಪುಷ್ಪಲತಾ.ವೈ.ಕೆ. ಅವರು ಫೆ.1ರಂದು ಸಂಜೆ ದಾಳಿ ನಡೆಸಿ ಅನ್ನಭಾಗ್ಯದ 4 ಕ್ವಿಂಟಲ್ ಅಕ್ಕಿ ಮತ್ತು 80 ಕ್ವಿಂಟಲ್ ರಾಗಿ ವಶಕ್ಕೆ ಪಡೆದಿದ್ದಾರೆ.

ಧನಲಕ್ಷ್ಮಿ ಕೋ ಜೋಳದ ವ್ಯಾಪಾರಿಗಳು ಎಂಬ ಗೋದಾಮಿನಲ್ಲಿ ಆದಿತ್ಯ ಎಂಬ ವ್ಯಕ್ತಿಯು ಅಕ್ರಮವಾಗಿ ಉಚಿತ ಅನ್ನಭಾಗ್ಯ ಯೋಜನಗೆ ಸಂಬಂಧಿಸಿದ ಅಕ್ಕಿ ಮತ್ತು ರಾಗಿಯನ್ನು ದಾಸ್ತಾನು ಇರಿಸಿರುವ ಬಗ್ಗೆ ಮಾಹಿತಿ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.ಬಡವರಿಗೆ ವಿತರಿಸಬೇಕಾದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸಿ, ನಂತರ ಅಕ್ಕಿಗೆ ಪಾಲಿಶ್ ಮಾಡಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿರುವುದಾಗಿ ವಿಷಯ ತಿಳಿದು ಬಂದಿದೆ.ಈ ಬಗ್ಗೆ ಪುಷ್ಪಲತಾ ವೈ.ಕೆ. ಮಾತನಾಡಿ, ಸಾರ್ವಜನಿಕರದೂರಿನ ಆಧಾರದ ಮೇಲೆ ಪರೀಕ್ಷಿಸಲು ಬಂದಾಗ ಗೋದಾಮನ್ನು ಬೀಗದಿಂದ ಜಡಿಯಲಾಗಿತ್ತು, ನಂತರ ಗೋದಾಮಿನ ಮುಂಭಾಗದಲ್ಲಿ ಅನ್ನಭಾಗ್ಯ ಅಕ್ಕಿ ಮತ್ತು ರಾಗಿ ಬಿದ್ದಿರುವುದನ್ನು ಕಂಡು ಕೂಡಲೇ ಗೋದಾಮಿನ ಮಾಲೀಕರನ್ನು ದೂರವಾಣಿ ಕರೆ ಮಾಡಿ ಸಂಪರ್ಕಿಸಿದಾಗ ಅವರು ಹಾರಿಕೆ ಉತ್ತರವನ್ನು ನೀಡಿ ದಿಕ್ಕುತಪ್ಪಿಸಲು ಪ್ರಯತ್ನಿಸಿದರು, ಆ ಸಂದರ್ಭದಲ್ಲಿ ತಹಸೀಲ್ದಾರರ ಆದೇಶ ಮತ್ತು ಮಾರ್ಗದರ್ಶನದಂತೆ ಮಾಲೀಕನಿಗೆ ನಿಗದಿತ ಸಮಯವನ್ನು ನೀಡಿ ಒಂದು ವೇಳೆ ಅವರು ಸ್ಥಳಕ್ಕೆಬಂದು ಗೋದಾಮಿನ ಬೀಗ ತೆಗೆದು ಒಳಗೆ ಪರಿಶೀಲಿಸಲು ಸಹಕರಿಸದಿದ್ದಲ್ಲಿ ಗೋದಾಮನ್ನು ಸೀಸ್ ಮಾಡಿ ವಶಪಡಿಸಿಕೊಳ್ಳಲು ಸೂಚಿಸಿದರು.

ಮಾಲೀಕರು ಗೋದಾಮಿನಲ್ಲಿರುವ ಅಕ್ಕಿ ಮತ್ತು ರಾಗಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ತಂದು ತಹಸೀಲ್ದಾರರಿಗೆ ತೋರಿಸಿದಲ್ಲಿ ತಾಲೂಕು ಆಡಳಿತ ಮತ್ತು ಪೊಲೀಸ್‌ ಇಲಾಖೆಯ ಸಮ್ಮುಖದಲ್ಲಿ ಗೋದಾವನ್ನು ತೆರೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಮಾರಾಟ ಮಾಡುವ ದಂಧೆ ಮತ್ತಷ್ಟು ಬಿರುಸುಗೊಂಡಿದೆ. ದಂಧೆಕೋರರು ಅಕ್ಕಿಯನ್ನು ಕೆ.ಜಿಗೆ 10ರಿಂದ 20 ರು. ನೀಡಿ ಖರೀದಿಸಿ, 40 ರಿಂದ 50 ರು.ಗೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು.