ದೇವನಹಳ್ಳಿ: ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ ಜನಸಮಾನ್ಯರ ಆಹಾರ ಭದ್ರತಾ ವಿಷಯದಲ್ಲಿ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು
ದೇವನಹಳ್ಳಿ: ಹಸಿವು ಮುಕ್ತ ಕರ್ನಾಟಕ ನಿರ್ಮಾಣದ ಉದ್ದೇಶದಿಂದ ಜಾರಿಗೊಳಿಸಿರುವ ಅನ್ನಭಾಗ್ಯ ಯೋಜನೆ ಜನಸಮಾನ್ಯರ ಆಹಾರ ಭದ್ರತಾ ವಿಷಯದಲ್ಲಿ ಒಂದು ಮೈಲಿಗಲ್ಲು ಸಾಧಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಪಟ್ಟಣದ ಟೌನ್ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಆಯೋಜಿಸಿದ್ದ ಜಿಲ್ಲಾ ಮಟ್ಟದ ೭೭ನೇ ಗಣರಾಜ್ಯೋತ್ಸವದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಸಚಿವರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ೨ ಲಕ್ಷದ ೨೪ ಸಾವಿರ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆಯಿಂದ ಅನುಕೂಲವಾಗಿದೆ. ೨೦೨೫-೨೬ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಮೀಸಲಾತಿಯಡಿ ಪರಿಶಿಷ್ಠ ಜಾತಿ/ ಪರಿಶಿಷ್ಠ ಪಂಗಡ ಹಾಗೂ ಇತರೆ ಸಮುದಾಯಗಳ ನಿರುದ್ಯೋಗ ಯುವಕರಿಗೆ ಅನುಕೂಲಕರವಾಗಲು ಸುಮಾರು ೩೫೧೭ ನ್ಯಾಯ ಬೆಲೆ ಅಂಗಡಿಗಳನ್ನು ಮಂಜೂರು ಮಾಡಿದ್ದು, ಹಂಚಿಕೆಯ ಕಾರ್ಯ ಪುಗತಿಯಲ್ಲಿದೆ ಎಂದು ಹೇಳಿದರು.ಮಹಾತ್ಮ ಗಾಂಧೀಜಿ ಆಶಯದಂತೆ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿಗೆ ತಂದಿದೆ. ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ಒದಗಿಸಲಾಗಿದೆ. ಮಹಿಳೆಯರ ಸಬಲೀಕರಣದ ಉದ್ದೇಶದಿಂದ ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು ೨೦೦೦ ರು.ಗಳಂತೆ ವರ್ಗಾವಣೆ ಮಾಡಲಾಗುತ್ತಿದೆ. ಯುವನಿಧಿ ಯೋಜನೆಯಡಿ ವಿದ್ಯಾವಂತ ನಿರುದ್ಯೋಗ ಯುವಕ/ ಯುವತಿಯವರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ಕೃಷಿ ಭಾಗ್ಯ ಯೋಜನೆಯಡಿ ಸುಸ್ಥಿರ ಕೃಷಿಯನ್ನು ಉತ್ತೇಜಿಸಿ ಬೆಳೆ ಉತ್ಪಾದಕತೆ ಮತ್ತು ರೈತರ ಜೀವನಮಟ್ಟ ಸುಧಾರಿಸುವ ಸಲುವಾಗಿ ಅನೇಕ ಸೌಲಭ್ಯ ನೀಡಲಾಗಿದೆ. ಜಿಲ್ಲೆಯಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಿಸಿ "ಮನೆಗೊಂದು ಉದ್ಯೋಗ " ನೀಡುವ ಸಂಕಲ್ಪದೊಂದಿಗೆ ನಿರುದ್ಯೋಗ ಯುವಕ/ ಯುವತಿಯರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮಹಾತ್ಮ ಗಾಂಧಿಜಿಯವರ "ಸ್ವಚ್ಛ ಭಾರತದ ಕನಸಿನಂತೆ " ಗ್ರಾಮಗಳ ಅಭಿವೃದ್ಧಿಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲು ವಿವಿಧ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಆರ್.ನಾರಾಯಣಸ್ವಾಮಿ ಹಾಗೂ ಅಂಗಾಂಗ ದಾನ ಮಾಡಿರುವ ಕುಟುಂಬದ ಸದಸ್ಯರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಸಂಸದ ಡಾ.ಕೆ ಸುಧಾಕರ್, ರಾಜ್ಯ ೫ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ. ನಾರಾಯಣಸ್ವಾಮಿ, ಬಯಪಾ ಅಧ್ಯಕ್ಷರಾದ ವಿ. ಶಾಂತಕುಮಾರ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ರಾಜಣ್ಣ, ಜಿಲ್ಲಾಧಿಕಾರಿ ಎ.ಬಿ ಬಸವರಾಜು, ಜಿಪಂ ಸಿಇಒ ಡಾ.ಕೆ.ಎನ್. ಅನುರಾಧ, ಎಸ್ಪಿ ಚಂದ್ರಕಾಂತ್, ಜಿಪಂ ಉಪಕಾರ್ಯದರ್ಶಿ ಶರತ್‌ಮಾರ್, ತಹಸಿಲ್ದಾರ್ ಎಂ.ಅನಿಲ್, ತಾಪಂ ಇಒ ಶ್ರೀನಾಥ್ ಗೌಡ ಇತರರು ಹಾಜರಿದ್ದರು.