ಟಿ.ಕೆ. ಬಡಾವಣೆ ರಾಯರ ಮಠದಲ್ಲಿ ಪ್ರಸಾದ ವಿತರಣೆಗೆ ಚಾಲನೆ

| Published : Apr 21 2025, 12:47 AM IST

ಸಾರಾಂಶ

ರಾಯರ ಮಠದಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿದ್ದ ಪ್ರಸಾದ ವಿತರಣೆ ಸೇವಾ ಚಟುವಟಿಕೆಯು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿತು,

ಕನ್ನಡಪ್ರಭ ವಾರ್ತೆ ಮೈಸೂರುನಗರದ ಟಿ.ಕೆ. ಬಡಾವಣೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪ್ರತಿ ಗುರುವಾರದ ಮಧ್ಯಾಹ್ನದ ವಿಶೇಷ ಉಚಿತ ಪ್ರಸಾದ ವಿತರಣೆ ಯೋಜನೆಗೆ ಚಾಲನೆ ನೀಡಲಾಗಿದೆ ಎಂದು ಶ್ರೀ ಗುರು ರಾಘವೇಂದ್ರ ಸೇವಾ ಟ್ರಸ್ಟ್ ನ ಟ್ರಸ್ಟಿ ಮತ್ತು ಹಿರಿಯ ವಕೀಲ ಕೆ. ಆರ್. ಶಿವಶಂಕರ್ ಹೇಳಿದರು.ರಾಯರ ವಿಶೇಷ ಕೃಪೆಯಿಂದ ಅನ್ನದಾನ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಯರ ಮಠದಲ್ಲಿ ಮೊದಲಿಂದಲೂ ನಡೆದುಕೊಂಡು ಬಂದಿದ್ದ ಪ್ರಸಾದ ವಿತರಣೆ ಸೇವಾ ಚಟುವಟಿಕೆಯು ಕೋವಿಡ್ ಸಂದರ್ಭದಲ್ಲಿ ಸ್ಥಗಿತಗೊಂಡಿತು, ನಂತರದ ದಿನಗಳಲ್ಲಿ ಕೆಲವು ಕಾರಣಾಂತರಗಳಿಂದ ಈ ಸೇವೆಯನ್ನು ಭಕ್ತಗಣಕ್ಕೆ ಕೊಡಲು ಆಗಿರಲಿಲ್ಲ. ಯೋಗಾತ್ಮ ಶ್ರೀಹರಿ ಅವರ ವಿಶೇಷ ಪ್ರೇರಣೆ ಮತ್ತು ಕಾರ್ಪಸ್ ಫಂಡ್ ಗೆ ಅವರು ಒಂದು ಲಕ್ಷ ರೂ. ಪ್ರಧಾನ ದೇಣಿಗೆ ನೀಡಿದ ಫಲವಾಗಿ ಈ ಯೋಜನೆ ಮರು ಚಾಲನೆ ಗೊಂಡಿರುವುದು ಸಂತಸಕರವಾದ ವಿಚಾರ ಎಂದು ಹೇಳಿದರು.300ಕ್ಕೂ ಹೆಚ್ಚು ಭಕ್ತರಿಗೆ ಗುರುವಾರ ಮಹಾ ಪ್ರಸಾದ ವಿತರಣೆಯಾಗಿದೆ ಎಂದು ಅವರು ತಿಳಿಸಿದರು. ಮುಂಬರುವ ವಾರಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ಭಕ್ತರಿಗೆ ವಿಸ್ತರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಏಕಾದಶಿ ಹೊರತುಪಡಿಸಿ ಉಳಿದ ಎಲ್ಲ ಗುರುವಾರಗಳಂದು ರಾಯರ ಮಹಾಪ್ರಸಾದವು ಬಂದಂಥ ಭಕ್ತರಿಗೆ ಲಭ್ಯವಾಗಲಿದೆ. ಆಸಕ್ತ ದಾನಿಗಳು ಧಾನ್ಯ ರೂಪದಲ್ಲಿ ಅಥವಾ ನಗದು ರೂಪದಲ್ಲಿ ಈ ಯೋಜನೆಗೆ ಸಹಕಾರ ನೀಡಲು ಅವಕಾಶವನ್ನೂ ಕಲ್ಪಿಸಿದೆ. ಮಾಹಿತಿಗೆ ಮೊ. 97403 99992 ಸಂಪರ್ಕಿಸುವುದು ಎಂದು ಅವರು ಹೇಳಿದರು. ಟ್ರಸ್ಟ್ ಅಧ್ಯಕ್ಷ ಎಚ್.ಎಸ್. ಸುಬ್ಬರಾವ್, ಕಾರ್ಯಾಧ್ಯಕ್ಷ ಎಸ್. ಜಯರಾಮ್, ಉಪಾಧ್ಯಕ್ಷ ದ್ವಾರಕಾನಾಥ್, ಸಹಾಯಕರಾದ ವೆಂಕಟಾಚಲ ಮತ್ತು ಬಾಣಸಿಗ ಪಾರ್ಥಸಾರಥಿ ಇದ್ದರು.